ನವದೆಹಲಿ : ದೇಶದ ಜನರಿಗೆ ಕರೊನಾ ಮೂರನೇ ಅಲೆಗೆ ಸಿದ್ಧರಾಗಿ ಎಂದು ಹೇಳಿದ ಎರಡೇ ದಿನಗಳ ನಂತರ ಕೇಂದ್ರ ಸರ್ಕಾರದ ಮುಖ್ಯ ವೈಜ್ಞಾನಿಕ ಸಲಹೆಗಾರ ಡಾ. ಕೆ. ವಿಜಯರಾಘವನ್ ಅವರು, ಅಗತ್ಯ ಕಠಿಣ ಕ್ರಮಗಳನ್ನು ಕೈಗೊಂಡರೆ ಮಾರಣಾಂತಿಕ ಮೂರನೇ ಅಲೆಯನ್ನು ದೇಶದಲ್ಲಿ ತಪ್ಪಿಸಬಹುದು ಎಂದು ಹೇಳಿದ್ದಾರೆ.
'ವೈರಸ್ ಪ್ರಸಾರವಾಗುತ್ತಿರುವ ಅಧಿಕ ಮಟ್ಟವನ್ನು ನೋಡಿದರೆ 3ನೇ ಹಂತ ಅನಿವಾರ್ಯ ಎನಿಸುತ್ತದೆ. ಆದರೆ ಯಾವ ಕಾಲಾವಧಿಯಲ್ಲಿ ಈ ಮೂರನೇ ಹಂತ ಸಂಭವಿಸಲಿದೆ ಎಂಬುದು ಸ್ಪಷ್ಟವಾಗಿಲ್ಲ. ಕಂತುಕಂತಿನಲ್ಲಿ ಸೋಂಕಿನ ದರ ಏರುತ್ತದೆಂದು ಭಾವಿಸೋಣ. ಆದರೆ ನಾವು ಹೊಸ ಅಲೆಗಳಿಗೆ ತಯಾರಾಗಬೇಕು' ಎಂದು ಮೇ 5 ರಂದು ಡಾ. ವಿಜಯರಾಘವನ್ ಹೇಳಿದ್ದರು.
ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯರಾಘವನ್, 'ನಾವು ಬಲವಾದ ಕ್ರಮಗಳನ್ನು ಕೈಗೊಂಡರೆ ಮೂರನೇ ಅಲೆಯು ಎಲ್ಲಾ ಸ್ಥಳಗಳಲ್ಲೂ ಸಂಭವಿಸುವುದಿಲ್ಲ ಅಥವಾ ಎಲ್ಲೂ ಸಂಭವಿಸುವುದಿಲ್ಲ. ನಾವು ಸರ್ಕಾರದ ಮಾರ್ಗದರ್ಶನವನ್ನು ಸ್ಥಳೀಯ ಮಟ್ಟದಲ್ಲಿ, ರಾಜ್ಯಗಳಲ್ಲಿ, ಜಿಲ್ಲೆಗಳಲ್ಲಿ ಮತ್ತು ಎಲ್ಲಾ ನಗರಗಳಲ್ಲಿ ಎಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸುತ್ತೇವೆ ಅನ್ನುವುದರ ಮೇಲೆ ಅದು ಅವಲಂಬಿಸಿದೆ' ಎಂದಿದ್ದಾರೆ.
ಕರೊನಾ ಎರಡನೇ ಅಲೆಯ ಹೊಡೆತಕ್ಕೇ ಭಾರತದ ವೈದ್ಯಕೀಯ ಸೇವೆ ನಲುಗಿದೆ. ಬೆಡ್, ಆಕ್ಸಿಜನ್, ಔಷಧಿಗಳ ಕೊರತೆ ಹಲವೆಡೆ ತಲೆಯೆತ್ತಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 4,14,188 ಹೊಸ ಕರೊನಾ ಪ್ರಕರಣಗಳು ದಾಖಲಾಗಿದ್ದರೆ, 3,915 ಜನ ಸಾವಪ್ಪಿದ್ದಾರೆ. ವೈದ್ಯಕೀಯ ತಜ್ನರ ಪ್ರಕಾರ ಸೋಂಕಿನ ನಿಜವಾದ ಪ್ರಮಾಣವು ಅಧಿಕೃತ ಅಂಕಿಗಿಂತ 5 ರಿಂದ 10 ಪಟ್ಟು ಹೆಚ್ಚಿದೆ ಎನ್ನಲಾಗಿದೆ.