ನವದೆಹಲಿ: ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 10 ರಾಜ್ಯಗಳ ಆಯ್ದ 54 ಜಿಲ್ಲಾಧಿಕಾರಿಗಳೊಂದಿಗೆ ಗುರುವಾರ ವಿಡಿಯೊ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು. ಈ ವೇಳೆ ಅವರು ಲಸಿಕೆ ವ್ಯರ್ಥವಾಗದಂತೆ ಕ್ರಮಕೈಗೊಳ್ಳುವಂತೆ ಸಲಹೆ ನೀಡಿದರು.
ಕೊರೊನಾ ವೈರಸ್ ಅಗೋಚರ ಹಾಗೂ ಪದೇಪದೇ ರೂಪಾಂತರಗೊಳ್ಳುವುದರಿಂದ ಹೆಚ್ಚು ಅಪಾಯಕಾರಿಯಾಗಿ ಪರಿಣಮಿಸಿದೆ. ಹೀಗಾಗಿ ಈ ವೈರಸ್ ವಿರುದ್ಧದ ಕಾರ್ಯತಂತ್ರವು ಕ್ರಿಯಾಶೀಲವಾಗಿರಬೇಕು ಹಾಗೂ ಹೊಸತನದಿಂದ ಕೂಡಿರಬೇಕು ಎಂದು ಪ್ರತಿಪಾದಿಸಿದರು.
'ಮಕ್ಕಳು ಹಾಗೂ ಯುವಜನರು ಈಗ ಹೆಚ್ಚು ಅಪಾಯ ಎದುರಿಸುತ್ತಿದ್ದಾರೆ' ಎಂದು ಕಳವಳ ವ್ಯಕ್ತಪಡಿಸಿದ ಅವರು, 'ನಿಮ್ಮ ಜಿಲ್ಲೆಗಳಲ್ಲಿ ಮಕ್ಕಳು ಹಾಗೂ ಯುವಜನರಲ್ಲಿ ಕೊರೊನಾ ಸೋಂಕು ಹರಡುತ್ತಿರುವುದು ಹಾಗೂ ಅದರ ಗಂಭಿರತೆ ಬಗ್ಗೆ ನಿಗಾ ಇಡಬೇಕು. ಈ ಕುರಿತ ಮಾಹಿತಿಯನ್ನು ದಾಖಲಿಸಬೇಕು' ಎಂದು ಅಧಿಕಾರಿಗಳಿಗೆ ಸೂಚಿಸಿದರು.
'ಲಸಿಕೆ ವ್ಯರ್ಥವಾಗುವುದನ್ನು ತಡೆಯಬೇಕು. ವ್ಯರ್ಥವಾಗುವ ಪ್ರತಿ ಡೋಸ್, ಸೋಂಕಿನ ವಿರುದ್ಧ ಒಬ್ಬ ವ್ಯಕ್ತಿಗೆ ನೀಡಬೇಕಾಗಿದ್ದ ರಕ್ಷಣೆಯನ್ನು ನಿರಾಕರಿಸಿದಂತೆ' ಎಂದೂ ಅವರು ಹೇಳಿದರು.
'ಕೋವಿಡ್-19 ಪ್ರಕರಣಗಳಲ್ಲಿ ಇಳಿಕೆ ಕಂಡುಬಂದಿದ್ದರೂ, ನಮ್ಮ ಮುಂದಿರುವ ಸವಾಲು ಕೊನೆಗೊಂಡಿಲ್ಲ. ಅಲ್ಪ ಪ್ರಮಾಣದ ಸೋಂಕು ಉಳಿದಿದ್ದರೂ ಅದನ್ನು ನಿರ್ಲಕ್ಷಿಸುವಂತಿಲ್ಲ. ಪ್ರಕರಣಗಳು ಕಡಿಮೆಯಾಗಿವೆ ಎಂದು ಮೈಮರೆಯುವಂತಿಲ್ಲ. ಕೋವಿಡ್-19 ನಿರ್ವಹಣೆಗೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಪಾಲಿಸಬೇಕು' ಎಂದರು.
ಅಧಿಕಾರಿಗಳೊಂದಿಗೆ ಪ್ರಧಾನಿ ನಡೆಸಿದ ಎರಡನೇ ಸಂವಾದ ಇದಾಗಿದೆ. ಆಯ್ದ ರಾಜ್ಯಗಳ ಅಧಿಕಾರಿಗಳೊಂದಿಗೆ ಮಂಗಳವಾರ ಮೊದಲ ಸಂವಾದ ನಡೆಸಿದ್ದರು.
ಗುರುವಾರ ನಡೆದ ಸಂವಾದದಲ್ಲಿ ಛತ್ತೀಸಗಡ, ಹರಿಯಾಣ, ಕೇರಳ, ಮಹಾರಾಷ್ಟ್ರ, ಒಡಿಶಾ, ಪುದುಚೇರಿ, ರಾಜಸ್ಥಾನ, ಉತ್ತರ ಪ್ರದೇಶ, ಪಶ್ಷಿಮ ಬಂಗಾಳ ಹಾಗೂ ಆಂಧ್ರಪ್ರದೇಶದ ಆಯ್ದ ಜಿಲ್ಲೆಗಳ ಅಧಿಕಾರಿಗಳು ಭಾಗಿಯಾಗಿದ್ದರು.