ಕಾಸರಗೋಡು: ಕಾಸರಗೋಡು ಜಿಲ್ಲೆಯ ಎಲ್ಲ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಕೋವಿಡ್ ಪ್ರತಿರೋಧ ಚಟುವಟಿಕೆಗಳು ಚುರುಕುಗೊಳಿಸಲಾಗಿದೆ.
ಇದರ ಅಂಗವಾಗಿ 38 ಗ್ರಾಮ ಪಂಚಾಯತ್ ಗಳ ಮತ್ತು 3 ನಗರಸಭೆಗಳಲ್ಲಿ ಕೋವಿಡ್ 19 ವಾರ್ ರೂಂ, ಹೆಲ್ಪ್ ಡೆಸ್ಕ್ ಇತ್ಯಾದಿಗಳ ಚಟುವಟಿಕೆ ಆರಂಭಗೊಂಡಿವೆ. ನೋಡೆಲ್ ಅಧಿಕಾರಿಗಳ ನೇಮಕ ನಡೆದಿವೆ. ಸ್ಥಳೀಯಡಳಿತ ಸಂಸ್ಥೆಗಳ ಮಟ್ಟದ ಕೊರೋನಾ ಕೋರ್ ಸಮಿತಿಗಳ ರಚನೆ ನಡೆದಿವೆ. ಸಂಚಾರ ಯೋಜನೆ ರಚಿಸಲಾಗಿದೆ. ಎಲ್ಲ ಪಂಚಾಯತ್ ಗಳಲ್ಲೂ ಆಂಬುಲೆನ್ಸ್ ಸೇವೆ ಸೋಮವಾರದಿಂದ ಆರಂಭಗೊಳ್ಳಲಿದೆ.
ಕಾಸರಗೋಡು ಜಿಲ್ಲೆಯ ಸ್ಥಳೀಯಾಡಳಿತ ಸಂಸ್ಥೇಗಳ ಅಧ್ಯಕ್ಷರ ಮತ್ತು ಕಾರ್ಯದರ್ಶಿಗಳ ಸಭೆಯಲ್ಲಿ ಕೊರೋನಾ ಪ್ರತಿರೋಧ ಚಟುವಟಿಕೆಗಳ ಅವಲೋಕನ ನಡೆಸಲಾಯಿತು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಮತ್ತು ಜಿಲ್ಲಾ ಪಿಡುಗು ನಿವಾರಣೆ ಪ್ರಾಧಿಕಾರದ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ಸಮಕ್ಷದಲ್ಲಿ ಈ ಸಭೆ ಜರುಗಿತು.
ಜಿಲ್ಲಾ ಪಂಚಾಯತ್ ನ ಮೇಲ್ನೋಟದಲ್ಲಿ ಆಕ್ಸಿಜನ್ ಬೆಡ್ ಗಳ ಖಚಿತತೆ ಸಂಬಂಧ ಕ್ರಮ ಕೈಗೊಳ್ಳಲಾಗುವುದು. ಜಿಲ್ಲಾ ಪಂಚಾಯತ್ ನೇತೃತ್ವದಲ್ಲಿ ಸ್ಥಳೀಯಾಡಳಿತ ಸಂಸ್ಥೇಗಳ ಸಹಾಯದೊಂದಿಗೆ ಆರಂಭಿಸಲಾಗುವ ಆಕ್ಸಿಜನ್ ಪ್ಲಾಂಟ್ ನ ಟೆಂಡರ್ ಕ್ರಮ ಆರಂಭಿಸಲಾಗಿದೆ. ಮೇ 27 ವರೆಗೆ ಟೆಂಡರ್ ಸ್ವೀಕರಿಸಲಾಗುವುದು.
ಜಿಲ್ಲೆಯಲ್ಲಿ ದಾಖಲಾತಿ ಪಡೆದಿರುವ ಕೋವಿಡ್ ರೋಗಿಗಳ ಚಿಕಿತ್ಸೆ, ಆಕ್ಸಿಜನ್ ಲಭ್ಯತೆ, ಜಾಗ್ರತೆ ಇತ್ಯಾದಿ ಖಚಿತಪಡಿಸಲು ಸಭೆ ನಿರ್ಧರಿಸಿದೆ. ಮಾಸ್ಟರ್ ಯೋಜನೆಯ ಶಿಕ್ಷಕರನ್ನು ಬಳಸಿ ವಾರ್ಡ್ ಮಟ್ಟದ ಜಾಗೃತಿ ಸಮಿತಿಗಳನ್ನು 2 ದಿನಗಳ ಅವಧಿಯಲ್ಲಿ ಚುರುಕುಗೊಳಿಸಲಾಗುವುದು. ವಾರ್ಡ್ ನ ಕೋವಿಡ್ ಬಾಧಿತರ ಯೋಗಕ್ಷೇಮ ಖಚಿತಪಡಿಸಲು ಸ್ವಯಂ ಸೇವಾ ಕಾರ್ಯಕರ್ತರ ಸಹಾಯಪಡೆಯಲಾಗುವುದು. ಕೋವಿಡ್ ತಪಾಸಣೆ ಹೆಚ್ಚಳಗೊಳಿಸಲಾಗುವುದು. ಟೆಸ್ಟ್ ಪಾಸಿಟಿವಿಟಿ ರೇಟ್ 50ಕ್ಕೂ ಅಧಿಕ ಇರುವ ಗ್ರಾಮ ಪಂಚಾಯತ್ ಗಳಲ್ಲಿ ಹೆಚ್ಚುವರಿ ಗಮನ ಹರಿಸಲಾಗುವುದು. ಸಜ್ಜುಗೊಳಿಸಲಾದ 41 ಡೊಮಿಸಲಿರಿ ಕೇರ್ ಸೆಂಟರ್ ಗಳಲ್ಲಿ ಪೂರ್ಣರೂಪದಲ್ಲಿ ಚಟುವಟಿಕೆ ಆರಂಭಿಸಲಾಗುವುದು.
ಮನೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್ ಬಾಧಿತರ ಮತ್ತು ಕ್ವಾರೆಂಟೈನ್ ನಲ್ಲಿರುವ ಮಂದಿಗೆ ಲಾಕ್ ಡೌನ್ ವಧಿಯಲ್ಲಿ ಆಹಾರ ಲಭ್ಯತೆಗೆ ಜನಪರ ಹೋಟೆಲ್ ಗಳ ಸಹಾಯದೊಂದಿಗೆ ಕ್ರಮ ಆರಂಭಿಸಲಾಗುವುದು. ಜಿಲ್ಲಾ ಪಂಚಾಯತ್ 2 ಸಾವಿರ ಆಕ್ಸಿಮೀಟರ್ ಒದಗಿಸಲಿದೆ. ಜಿಲ್ಲೆಯ ಸಾರ್ವಜನಿಕ, ಕಾಸಗಿ ಆಸ್ಪತ್ರೆಗಳನ್ನು ಸಂಪರ್ಕಿಸಿ ಟೆಲಿ ಮೆಡಿಸಿನ್ ಸೌಲಭ್ಯ ಏರ್ಪಡಿಸಲಾಗುವುದು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ತಿಳಿಸಿದರು.
ಸಭೆಯಲ್ಲಿ ಗ್ರಾಮ, ಬ್ಲೋಕ್ ಪಂಚಾಯತ್ ಗಳ ಅಧ್ಯಕ್ಷರು, ನಗರಸಭೆಗಳ ಅಧ್ಯಕ್ಷರು, ಕಾರ್ಯದರ್ಶಿಗಳು, ಪಂಚಾಯತ್ ಡೆಪ್ಯೂಟಿ ಜೈಸನ್ ಮ್ಯಾಥ್ಯೂ, ಜಿಲ್ಲಾ ಪಂಚಾಯತ್ ಕಾರ್ಯದರ್ಶಿ ಪಿ. ನಂದಕುಮಾರ್ ಉಪಸ್ಥಿತರಿದ್ದರು.