ನವದೆಹಲಿ: ರೂಪಾಂತರಿತ ಕೊರೊನಾ ವೈರಸ್‌ಗಳನ್ನು ಸಮರ್ಪಕವಾಗಿ ಎದುರಿಸುವುದರ ಜತಗೆ, ಸೋಂಕು ತೀವ್ರ ಸ್ವರೂಪಕ್ಕೆ ಹೋಗದಂತೆ ತಡೆಯುವಲ್ಲಿಯೂ ಲಸಿಕೆಗಳು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದು ಖಾಸಗಿ ಆರೋಗ್ಯ ಸಂಸ್ಥೆಯ ಅಧ್ಯಯನವೊಂದರಿಂದ ತಿಳಿದುಬಂದಿದೆ.
ಲಸಿಕೆಗಳಿಂದ ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣವನ್ನು ಕಡಿಮೆ ಮಾಡುವುದರ ಜತೆಗೆ ಮರಣ ಪ್ರಮಾಣವನ್ನು ನಿಯಂತ್ರಿಸಬಹುದು ಎಂದು ಇಂದ್ರಪ್ರಸ್ಥ ಅಪೋಲೊ ಆಸ್ಪತ್ರೆ ಈ ಅಧ್ಯಯನ ನಡೆಸಿದೆ.
ಆಸ್ಪತ್ರೆಯಲ್ಲಿ ಕೆಲಸ ಮಾಡುವ, ಸೋಂಕಿನ ಲಕ್ಷಣವಿದ್ದ 69 ಆರೋಗ್ಯ ಕಾರ್ಯಕರ್ತರ ಮೇಲೆ ಈ ಅಧ್ಯಯನವನ್ನು ನಡೆಸಲಾಗಿದೆ.
'ಈ ವರ್ಷದ ಪ್ರಾರಂಭದಲ್ಲೇ ಈ ಆರೋಗ್ಯ ಕಾರ್ಯಕರ್ತರು ಕೋವಿಶೀಲ್ಡ್ ಲಸಿಕೆ ಪಡೆದಿದ್ದರು. ಆದರೂ ಅವರಲ್ಲಿ ಕೋವಿಡ್-19 ದೃಢಪಟ್ಟಿತ್ತು. 69 ಜನರಲ್ಲಿ 51 ಜನರು ಎರಡನೇ ಡೋಸ್ ಲಸಿಕೆ ಕೂಡ ಪಡೆದಿದ್ದರು' ಎಂದು ಅಪೋಲೊ ಆಸ್ಪತ್ರೆಗಳ ಸಮೂಹದ ವೈದ್ಯಕೀಯ ನಿರ್ದೇಶಕ ಡಾ. ಅನುಪಮ್ ಸಿಬಲ್ ಹೇಳಿದ್ದಾರೆ.
ಸೌಮ್ಯ ಪ್ರಮಾಣದ ಸೋಂಕಿನ ಲಕ್ಷಣಗಳಿದ್ದ ಇಬ್ಬರು ಮಾತ್ರ ಆಸ್ಪತ್ರೆಗೆ ದಾಖಲಾದರು. ಉಳಿದಂತೆ ತೀವ್ರ ನಿಗಾ ಘಟಕಕ್ಕೆ ಒಬ್ಬರೂ ದಾಖಲಾಗಲಿಲ್ಲ, ಅಲ್ಲದೆ ಯಾವುದೇ ಸಾವು ಸಂಭವಿಸಲಿಲ್ಲ. ಯಾರೊಬ್ಬರೂ ತೀವ್ರ ಅನಾರೋಗ್ಯ ಸಮಸ್ಯೆ ಎದುರಿಸಲಿಲ್ಲ. ಲಸಿಕೆಯ ರಕ್ಷಣೆ ಇವರನ್ನು ಅಪಾಯದಿಂದ ಪಾರುಮಾಡಿದೆ' ಎಂದು ಅವರು ಹೇಳಿದ್ದಾರೆ.