ನವದೆಹಲಿ: ಕೇಂದ್ರ ಸರ್ಕಾರ ಇಂದು ರೈತರ ಖಾತೆಗಳಿಗೆ ಪಿಎಂ ಕಿಸಾನ್ 8ನೇ ಕಂತಿನ ಹಣ ಜಮಾ ಮಾಡಿದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮನ್ ನಿಧಿ ಯೋಜನೆ(ಪಿಎಂ ಕಿಸಾನ್) ಯೋಜನೆಯನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 2018ರಲ್ಲಿ ಭಾರಿ ಮಹತ್ವಾಕಾಂಕ್ಷೆಯಿಂದ ಪ್ರಾರಂಭಿಸಿದೆ.
ಈ ಯೋಜನೆಯಡಿ ಸಣ್ಣ ಮತ್ತು ಅತಿಸಣ್ಣ ರೈತರಿಗೆ ನೆರವಾಗಲು ವಾರ್ಷಿಕ 6,000 ರೂಗಳನ್ನು ಒಂದೇ ಬಾರಿಗೆ ನೀಡದೆ ಮೂರು ಕಂತುಗಳಲ್ಲಿ ರೈತರ ಬ್ಯಾಂಕ್ ಖಾತೆಗಳಲ್ಲಿ ಜಮಾ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರ ಅರ್ಹ ರೈತನ ಖಾತೆಯಲ್ಲಿ ಪ್ರತಿ ವರ್ಷ ನಾಲ್ಕು ತಿಂಗಳಿಗೊಮ್ಮೆ ಎರಡು ಸಾವಿರ ರೂಪಾಯಿ ಜಮಾ ಮಾಡುತ್ತದೆ.
ಏಪ್ರಿಲ್-ಜುಲೈ ನಡುವೆ ಮೊದಲ ಕಂತು, ಆಗಸ್ಟ್-ನವೆಂಬರ್ ನಡುವೆ ಎರಡನೇ ಕಂತು ಹಾಗೂ ಡಿಸೆಂಬರ್-ಮಾರ್ಚ್ ನಡುವೆ ಮೂರನೇ ಕಂತು ನಗದು ಜಮಾ ಮಾಡುತ್ತದೆ. ಈ ಬಾರಿ 9.5 ಕೋಟಿ ಅರ್ಹ ರೈತರ ಖಾತೆಗೆ 8ನೇ ಕಂತಿನಲ್ಲಿ 19,000 ಕೋಟಿ ರೂ. ಗೆ ಹೆಚ್ಚು ಹಣವನ್ನು ಪ್ರಧಾನಿ ನರೇಂದ್ರ ಮೋದಿ ಜಮಾ ಮಾಡಿದ್ದಾರೆ.
ಒಟ್ಟು 2 ಹೆಕ್ಟೇರ್‌ಗಿಂತ ಕಡಿಮೆ ಭೂಮಿ ಹೊಂದಿರುವ ರೈತರು ಈ ವಾರ್ಷಿಕ ಯೋಜನೆಯಿಂದ ಪ್ರಯೋಜನ ಪಡೆಯಲಿದ್ದಾರೆ. ಈ ಯೋಜನೆಯನ್ನು 2018ರ ಡಿಸೆಂಬರ್‌ನಲ್ಲಿ ಪ್ರಾರಂಭಿಸಿದಾಗಿನಿಂದ ಸರ್ಕಾರ ಏಳು ಕಂತುಗಳಲ್ಲಿ ರೈತರಿಗೆ ಹಣ ಪಾವತಿಸಿದೆ. ಆದರೆ, ಹಣವನ್ನು ನಮ್ಮ ಖಾತೆಗೆ ಜಮಾ ಮಾಡಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಸುಲಭವಾಗಿ ತಿಳಿದುಕೊಳ್ಳಬಹುದು. ಕೆಲವರಿಗೆ ಎಸ್ ಎಂ ಎಸ್ ಸಂದೇಶಗಳು ಬರಲಿವೆ. ಒಂದುವೇಳೆ ನಿಮಗೆ ಸಂದೇಶ ಬರದಿದ್ದರೆ ಈ ಕೆಳಗಿನ ವಿಧಾನ ಅನುಸರಿಸಿ.
ಸ್ಟೇಟಸ್ ಈ ರೀತಿ ಚೆಕ್ ಮಾಡಿಕೊಳ್ಳಿ:
* ಪಿಎಂ ಕಿಸಾನ್ ಸಮ್ಮನ್ ನಿಧಿ ಯೋಜನೆಯ ಅಧಿಕೃತ ವೆಬ್‌ಸೈಟ್ pmkisan.gov.in ಗೆ ಹೋಗಿ, ಮೆನು ಬಾರ್‌ನಲ್ಲಿರುವ 'ಫಾರ್ಮರ್ಸ್ ಕಾರ್ನರ್' ಕ್ಲಿಕ್ ಮಾಡಿ.
* ಈಗ ನಿಮಗೆ ಮೂರು ಆಯ್ಕೆಗಳು ಕಾಣಿಸುತ್ತವೆ (ಎ) ಆಧಾರ್ ಸಂಖ್ಯೆ, (ಬಿ) ಬ್ಯಾಂಕ್ ಖಾತೆ ಸಂಖ್ಯೆ, (ಸಿ) ಮೊಬೈಲ್ ಸಂಖ್ಯೆ. ಇದರಲ್ಲಿ ಯಾವುದಾದರೂ ಆಯ್ಕೆಯನ್ನು ಆರಿಸುವ ಮೂಲಕ ಪಾವತಿ ಸ್ಥಿತಿಯನ್ನು ಚೆಕ್ ಮಾಡಿಕೊಳ್ಳಬುದು.
* ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ಸಂಖ್ಯೆ ಅಥವಾ ಮೊಬೈಲ್ ಸಂಖ್ಯೆಯನ್ನು ನಮೂದಿಸಿದ ನಂತರ, ನೀವು ' ಗೆಟ್ ಡೇಟಾʼಆಯ್ಕೆಯನ್ನು ಕ್ಲಿಕ್ ಮಾಡಬೇಕು.
* ಈಗ ನಿಮಗೆ ಪರದೆಯ ಮೇಲೆ ನಗದು ಜಮಾ ಆಗಿದೆಯೋ ಇಲ್ಲವೋ ಎಂಬುದನ್ನು ನಿಮಗೆ ತೋರಿಸುತ್ತದೆ.
ರಾಜ್ಯ ಸರ್ಕಾರಗಳು ಆರ್‌ಎಫ್‌ಟಿ ಅನುಮೋದಿಸಿದ ನಂತರ ಸರ್ಕಾರದ ಎಫ್‌ಟಿಒ(ನಿಧಿ ವರ್ಗಾವಣೆ ಆದೇಶ) ಕಾಣಿಸಿಕೊಳ್ಳುತ್ತದೆ ಒಂದು ವೇಳೆ ನಿಮಗೆ ಅದು ಬರದಿದ್ದರೆ, ಸ್ಥಳೀಯ ಕೃಷಿ ಇಲಾಖೆ ಅಧಿಕಾರಿಯನ್ನು ಸಂಪರ್ಕಿಸಿ.
ಅದೇ ರೀತಿ ಪಿಎಂ ಕಿಸಾನ್ ಸಹಾಯವಾಣಿ 011-24300606 ಗೆ ಕರೆ ಮಾಡುವ ಮೂಲಕ ಮಾಹಿತಿ ಪಡೆಯಬಹುದು. ನಿಮ್ಮ ಹೆಸರು ಫಲಾನುಭವಿಗಳ ಪಟ್ಟಿಯಲ್ಲಿದ್ದರೆ ಮಾತ್ರ ನಗದು ಜಮಾ ಆಗಲಿದೆ ಎಂಬುದನ್ನು ನೆನಪಿಟ್ಟುಕೊಳ್ಳುವುದು ಮುಖ್ಯ.