ತಿರುವನಂತಪುರ: ಕೊರೋನದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ವಿಧಿಸಲಾಗಿರುವ ಲಾಕ್ ಡೌನ್ ನ ಒಟ್ಟು ಫಲಿತಾಂಶವನ್ನು ತಿಳಿಯಲು ನಾವು ಇನ್ನೂ ಒಂದು ವಾರ ಕಾಯಬೇಕಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು. ದೈನಂದಿನ ಕೊರೋನಾ ಪರಿಶೀಲನಾ ಸಭೆಯ ಬಳಿಕ ಅವರು ನಿನ್ನೆ ಸಂಜೆ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ಜಾಗ್ರತೆಯ ಮುಂದುವರಿಕೆ ಅಗತ್ಯವಿದೆ ಎಂದು ಸಿಎಂ ಹೇಳಿದರು.
ಜನರು ಲಾಕ್ ಡೌನ್ ಜೊತೆ ಸಹಕರಿಸುತ್ತಿದ್ದಾರೆ. ಲಾಕ್‍ಡೌನ್ ನ ಯಶಸ್ಸು ಧನಾತ್ಮಕವಾಗಲಿದೆಯೆಂದೇ ಭಾವಿಸಲಾಗಿದೆ. ಜನರು ಅಗತ್ಯಕ್ಕಾಗಿ ಮಾತ್ರ ಹೊರಗೆ ತೆರಳಬೇಕು ಎಂಬ ನಿಬಂಧನೆಗಳು ಒಂದಷ್ಟು ಕಷ್ಟಕರವಾದರೂ ಅದರ ಫಲ ನಮ್ಮೆಲ್ಲರ ಸುದೃಢ ಭವಿಷ್ಯಕ್ಕಿರುವ ಬಾಗಿಲಾಗಿದೆ. ನಿಬಂಧನೆಗಳು ಜಾರಿಗೆ ಬಂದಂದಿನಿಂದ ಸೋಂಕು ಹರಡುವಿಕೆಯಲ್ಲಿ ಗಣನೀಯ ಬದಲಾವಣೆಗಳಾಗಿವೆ ಎಂದವರು ತಿಳಿಸಿದರು.
ಮೇ 1-8 ರವರೆಗೆ ದಿನಕ್ಕೆ ಸರಾಸರಿ 37,144 ಪ್ರಕರಣಗಳು ವರದಿಯಾಗಿವೆ. ಆದಾಗ್ಯೂ, ಲಾಕ್ ಡೌನ್ ನಂತರ, ಈ ಸಂಖ್ಯೆ 35,919 ಕ್ಕೆ ಇಳಿದಿದೆ. 9 ಜಿಲ್ಲೆಗಳಲ್ಲಿ, ಈ ಪ್ರಮಾಣವು ಶೇಕಡಾ 10 ರಿಂದ 30 ರಷ್ಟು ಕಡಿಮೆಯಾಗಿದೆ. ವಯನಾಡ್ ಜಿಲ್ಲೆಯಲ್ಲಿ ಸೋಂಕಿನ ಪ್ರಮಾಣ ಕಡಿಮೆ ಇದೆ. ಆದರೆ ಕೊಲ್ಲಂ ಜಿಲ್ಲೆಯಲ್ಲಿ ಶೇ.23 ಹೆಚ್ಚಳವಾಗಿದೆ ಎಂದು ಸಿಎಂ ಹೇಳಿದರು.
ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರಿಗೆ ಲಸಿಕೆ ನೀಡಲು ಅನುಮತಿಗಾಗಿ ಐಸಿಎಂಆರ್ ನ್ನು ಸಂಪರ್ಕಿಸಲಾಗುವುದು. ಲಸಿಕೆಗಾಗಿ ಜಾಗತಿಕ ಟೆಂಡರ್ ಪ್ರಕ್ರಿಯೆ ಪ್ರಾರಂಭವಾಗಿದೆ. ವ್ಯಾಕ್ಸಿನೇಷನ್ಗಾಗಿ ಲಕ್ಷಾಂತರ ಲಸಿಕೆಗಳು ಬೇಕಾಗಲಿವೆ. ಗ್ರಾಮೀಣ ಮತ್ತು ಅರಣ್ಯ ಪ್ರದೇಶದಲ್ಲಿ ಜಾಗರೂಕತೆ ಅಗತ್ಯ. ಕೊರೋನಾದಿಂದ ಬಳಲುತ್ತಿರುವ ತೋಟ ಕಾರ್ಮಿಕರಿಗೆ(ಚಹಾ ತೋಟದ) ವಿಶೇಷ ಶಿಬಿರಗಳಲ್ಲಿ ವಸತಿ ಕಲ್ಪಿಸಲಾಗುವುದು ಎಂದು ಸಿಎಂ ಹೇಳಿದರು.