ನವದೆಹಲಿ: ಸೌಮ್ಯ ಸ್ವರೂಪದ ಕೋವಿಡ್-19ರಿಂದ ಚೇತರಿಸಿಕೊಂಡವರಲ್ಲಿ ತಿಂಗಳ ನಂತರವೂ ರೋಗನಿರೋಧಕ ಕೋಶಗಳು ವೈರಾಣುವಿನ ವಿರುದ್ಧ ಪ್ರತಿಕಾಯಗಳನ್ನು ಸೃಷ್ಟಿಸುತ್ತಿರುತ್ತವೆ ಎಂದು ಅಧ್ಯಯನವೊಂದು ತಿಳಿಸಿದೆ.
ಈ ಜೀವಕೋಶಗಳು ಜೀವಿತಾವಧಿಯಲ್ಲಿ ಎಲ್ಲ ಸಮಯದಲ್ಲೂ ಪ್ರತಿಕಾಯಗಳನ್ನು ಉತ್ಪಾದಿಸುತ್ತವೆ ಎಂಬುದನ್ನು ಅಮೆರಿಕ ಸೇಂಟ್ ಲೂಯಿಸ್‌ನ ವಾಷಿಂಗ್ಟನ್ ಯುನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್‌ನ ಸಂಶೋಧಕರ ಅಧ್ಯಯನ ಕಂಡುಕೊಂಡಿದೆ. 'ನೇಚರ್ ಜರ್ನಲ್'ನಲ್ಲಿ ಈ ಅಧ್ಯಯನ ಸೋಮವಾರ ಪ್ರಕಟವಾಗಿದೆ.
'ಕೋವಿಡ್-19ರ ನಂತರ ಪ್ರತಿಕಾಯಗಳು ಬೇಗನೆ ಕ್ಷೀಣಿಸುತ್ತವೆ, ಹಾಗಾಗಿ ರೋಗನಿರೋಧಕ ಶಕ್ತಿ ದೀರ್ಘಕಾಲ ಇರುವುದಿಲ್ಲ ಎಂಬ ವರದಿಗಳು ಮಾಧ್ಯಮಗಳಲ್ಲಿ ಪ್ರಕಟವಾಗಿದ್ದವು. ಆದರೆ ಅವು ದತ್ತಾಂಶಗಳ ತಪ್ಪು ವ್ಯಾಖ್ಯಾನವಾಗಿದೆ. ತೀವ್ರ ಸೋಂಕಿತರಲ್ಲಿ ಪ್ರತಿಕಾಯದ ಮಟ್ಟಗಳು ಇಳಿಯುವುದು ಸಾಮಾನ್ಯ. ಆದರೆ ಅದು ಶೂನ್ಯಕ್ಕೆ ಇಳಿಯುವುದಿಲ್ಲ' ಎಂದು ಸಂಶೋಧಕ ಪ್ರೊ. ಅಲಿ ಎಲ್ಲೆಬೆಡಿ ತಿಳಿಸಿದ್ದಾರೆ.
ರೋಗ ಲಕ್ಷಣ ಕಂಡು ಬಂದವರಲ್ಲಿ 11 ತಿಂಗಳ ಬಳಿಕವೂ ಪ್ರತಿಕಾಯ ಉತ್ಪಾದಿಸುವ ಕೋಶಗಳು ಇರುವುದನ್ನು ಸಂಶೋಧಕರು ಪತ್ತೆ ಹಚ್ಚಿದ್ದಾರೆ. 'ಇವು ಜೀವಿತ ವ್ಯಕ್ತಿಗಳ ಜೀವಕೋಶಗಳಿಗೆ ಪ್ರತಿಕಾಯಗಳನ್ನು ಉತ್ಪಾದಿಸುತ್ತಿರುತ್ತವೆ. ಇದು ದೀರ್ಘಕಾಲೀನ ರೋಗನಿರೋಧಕ ಶಕ್ತಿಗೆ ಬಲವಾದ ಸಾಕ್ಷಿ' ಎಂದು ಅಲಿ ಹೇಳಿದ್ದಾರೆ.