ನವದೆಹಲಿ: ಕೋವಾಕ್ಸಿನ್ ಲಸಿಕೆ ಪೂರೈಕೆಯ ನಮ್ಮ ಉದ್ದೇಶಗಳ ಬಗ್ಗೆ ಕೆಲವು ರಾಜ್ಯಗಳು ದೂರುತ್ತಿರುವುದು ನಿರಾಶಾದಾಯಕವಾಗಿದೆ ಎಂದು ಲಸಿಕೆ ತಯಾರಕ ಭಾರತ್ ಬಯೋಟೆಕ್ ಕಂಪನಿಯ ಉನ್ನತ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
ಕಂಪನಿಯೂ ಈಗಾಗಲೇ ಮೇ 10 ರಂದು 18 ರಾಜ್ಯಗಳಿಗೆ ಕೋವಾಕ್ಸಿನ್ ಲಾಟ್‌ಗಳನ್ನು ರವಾನಿಸಿದೆ ಎಂದು ಭಾರತ್ ಬಯೋಟೆಕ್ ಜಂಟಿ ವ್ಯವಸ್ಥಾಪಕ ನಿರ್ದೇಶಕ ಸುಚಿತ್ರಾ ಎಲ್ಲಾ ಅವರು ಟ್ವೀಟ್ ಮಾಡಿದ್ದಾರೆ.
ಸಣ್ಣ ಸಾಗಣೆಯಲ್ಲಿ 18 ರಾಜ್ಯಗಳಿಗೆ ಲಸಿಕೆ ರವಾನಿಸಲಾಗಿದೆ. ಕೆಲವು ರಾಜ್ಯಗಳು ನಮ್ಮ ಉದ್ದೇಶಗಳ ಬಗ್ಗೆ ದೂರುವುದನ್ನು ಕೇಳಿ ನಮ್ಮ ತಂಡಗಳಿಗೆ ಸಾಕಷ್ಟು ನಿರಾಶೆಯಾಗಿದೆ. ನಮ್ಮ 50 ಉದ್ಯೋಗಿಗಳು ಕೋವಿಡ್ ಕಾರಣದಿಂದಾಗಿ ಕೆಲಸದಿಂದ ಹೊರಗುಳಿದಿದ್ದಾರೆ, ಆದರೂ ನಾವು ಸಮರೋಪಾದಿಯಲ್ಲಿ ಸಾಂಕ್ರಾಮಿಕ ಲಾಕ್ ಡೌನ್ ಮಧ್ಯೆಯೂ ದಿನದ 24 ಗಂಟೆ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ ಎಂದು ಅವರು ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಹೈದರಾಬಾದ್ ಮೂಲದ ಲಸಿಕೆ ತಯಾರಿಕಾ ಸಂಸ್ಥೆಯು ಆಂಧ್ರಪ್ರದೇಶ, ಕರ್ನಾಟಕ, ಹರಿಯಾಣ, ಒಡಿಶಾ, ಅಸ್ಸಾಂ, ಜಮ್ಮು ಮತ್ತು ಕಾಶ್ಮೀರ, ತಮಿಳುನಾಡು, ಬಿಹಾರ, ಜಾರ್ಖಂಡ್ ಮತ್ತು ದೆಹಲಿ ಸೇರಿದಂತೆ 18 ರಾಜ್ಯಗಳಿಗೆ ಕೋವಾಕ್ಸಿನ್ ಪೂರೈಸುತ್ತಿದೆ.
ನಿನ್ನೆ ಬೆಳಿಗ್ಗೆ ರಾಷ್ಟ್ರ ರಾಜಧಾನಿಗೆ "ಹೆಚ್ಚುವರಿ" ಕೋವಾಕ್ಸಿನ್ ಡೋಸ್ ನೀಡಲು ಸಾಧ್ಯವಿಲ್ಲ ಎಂದು ಲಸಿಕೆ ತಯಾರಕ ಭಾರತ್ ಬಯೋಟೆಕ್ ದೆಹಲಿ ಸರ್ಕಾರಕ್ಕೆ ತಿಳಿಸಿದೆ ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದರು. ಅಲ್ಲದೆ ಕೇಂದ್ರ ಸರ್ಕಾರ ಕೋವಿಡ್ ಲಸಿಕೆ ಪೂರೈಕೆ ನಿಯಂತ್ರಿಸುತ್ತಿದೆ ಎಂದು ಆರೋಪಿಸಿದ್ದರು.