ಮುಂಬೈ: ಸಹಜವಾಗಿ ಮದುವೆಗಳಲ್ಲಿ ವರನು ವಧುವಿಗೆ ಮಂಗಳಸೂತ್ರ ಕಟ್ಟುತ್ತಾನೆ. ಆದರೆ ಇಲ್ಲಿ ವಧುವೇ ವರನಿಗೆ ತಾಳಿ ಕಟ್ಟುವ ಮೂಲಕ ವಿವಾಹವಾಗಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.
ತಾಳಿ ಕಟ್ಟಿಸಿಕೊಂಡಿರುವ ವರ ಶಾರ್ದೂಲ್ ಕದಮ್ ಇದು ಸ್ರ್ತೀ ಸಮಾನತೆಯ ವಿವಾಹ ಎಂದು ಹೇಳಿದ್ದಾರೆ. ಕಳೆದ 4 ತಿಂಗಳ ಹಿಂದೆ ಈ ಮದುವೆ ಮುಂಬೈನಲ್ಲಿ ನಡೆದಿದೆ. ಯುವತಿ ಶಾರ್ದೂಲ್‌ಗೆ ತಾಳಿಕಟ್ಟುವ ಫೋಟೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನವ ಜೀವನಕ್ಕೆ ಕಾಲಿಟ್ಟಿರುವ ಶಾರ್ದೂಲ್ ಮತ್ತು ತನುಜಾ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದಾರೆ. ಮಹಿಳಾವಾದಿಯಾಗಿರುವ ಶಾರ್ದೂಲ್, ಸಹ ಜೀವನ ನಡೆಸುವ ನಾವು ಎಲ್ಲ ವಿಚಾರಗಳಲ್ಲೂ ಸರಿಸಮಾನರಾಗಿರಬೇಕು ಎಂದು ಹೇಳಿದ್ದಾರೆ.
ಮದುವೆಯಲ್ಲಿ ಮೊದಲಿಗೆ ಶಾರ್ದೂಲ್, ತನುಜಾಗೆ ತಾಳಿಕಟ್ಟಿದ್ದಾರೆ. ಬಳಿಕ ತನುಜಾರಿಂದ ಶಾರ್ದೂಲ್ ಮಂಗಳಸೂತ್ರ ಕಟ್ಟಿಸಿಕೊಂಡಿದ್ದಾರೆ.
ಶಾರ್ದೂಲ್ ಮತ್ತು ತನುಜಾ
ಈ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಶಾರ್ದೂಲ್‌ನನ್ನು ಹಲವರು ಟ್ರೋಲ್ ಮಾಡಿದ್ದಾರೆ. ನೀವು ಸೀರೆ ಉಡಬೇಕಿತ್ತು, ಸ್ವಲ್ಪ ನಾಚಿಕೆಯನ್ನು ತೋರಿಸಬೇಕಿತ್ತು ಎಂದು ಕಾಲೆಳೆದಿದ್ದಾರೆ.
ಮದುವೆಯಾಗಿ 4 ತಿಂಗಳು ಕಳೆದರೂ ತಾಳಿ ಕಟ್ಟಿಕೊಂಡಿರುವ ಶಾರ್ದೂಲ್, ನಾವಿಬ್ಬರು ಮಂಗಳಸೂತ್ರಕ್ಕೆ ಗೌರವ ಕೊಡುತ್ತೇವೆ, ಟ್ರೋಲ್‌ಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.