ಮ್ಯಾಡ್ರಿಡ್ : ಭಾರತ ಸೇರಿದಂತೆ ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಲಸಿಕೆ ಕೊರತೆ ಇರುವಂತೆಯೇ, ಒಬ್ಬ ವ್ಯಕ್ತಿಗೆ 2 ವಿಭಿನ್ನ ಲಸಿಕೆಗಳನ್ನು ನೀಡಿದರೆ ಪ್ರತಿಕೂಲ ಪರಿಣಾಮ ಉಂಟಾದೀತೇ ಎಂಬ ಪ್ರಶ್ನೆ ಎದುರಾಗಿತ್ತು. ಸ್ಪೇನ್‌ನಲ್ಲಿ ನಡೆದ ಅಧ್ಯಯನವೊಂದು ಇದಕ್ಕೆ ಉತ್ತರ ನೀಡಿದೆ. ಆಸ್ಟ್ರಾಜೆನೆಕಾ(ಕೊವಿಶೀಲ್ಡ್) ಲಸಿಕೆಯ ಒಂದು ಡೋಸ್ ನೀಡಿದ ಬಳಿಕ ಅದೇ ವ್ಯಕ್ತಿಗೆ 2ನೇ ಡೋಸ್ ಆಗಿ ಫೈಜರ್ ಲಸಿಕೆ ನೀಡಲಾಗಿದೆ. ಅಂಥವರ ಆರೋಗ್ಯ ಸ್ಥಿತಿಯಲ್ಲಿ ಯಾವುದೇ ಋಣಾತ್ಮಕ ಬೆಳವಣಿಗೆ ಉಂಟಾಗಿಲ್ಲ. ಹಾಗಾಗಿ ಈ ಎರಡು ಲಸಿಕೆಗಳ ಮಿಶ್ರ ಡೋಸ್ ಪರಿಣಾಮಕಾರಿ ಹಾಗೂ ಸುರಕ್ಷಿತ ಎಂಬುದನ್ನು ಪ್ರಾಥಮಿಕ ಅಧ್ಯಯನಲ್ಲಿ ದೃಢೀಕರಿಸಲಾಗಿದೆ.
ಸ್ಪೇನ್ ಸರಕಾರದ ಕಾರ್ಲೊಸ್ ಹೆಲ್ತ್ ಇನ್‌ಸ್ಟಿಟ್ಯೂಟ್ ನಡೆಸಿರುವ ಅಧ್ಯಯನದಲ್ಲಿ ಈ ಅಂಶ ದೃಢಪಟ್ಟಿದೆ. ಮೊದಲ ಡೋಸ್‌ನಲ್ಲಿ ಫೈಜರ್ ಲಸಿಕೆ ಪಡೆದುಕೊಂಡವರಲ್ಲಿ ಇಮ್ಯೂನೋ ಗ್ಲೋಬುನ್ ಜಿ ಪ್ರತಿಕಾಯಗಳ ಪ್ರಮಾಣ 30-40ರಷ್ಟು ಪಟ್ಟು ಹೆಚ್ಚಾಗಿದೆ. ಮೊದಲ ಡೋಸ್‌ನಲ್ಲಿ ಆಸ್ಟ್ರಾಜೆ ನೆಕಾ ಲಸಿಕೆ ಪಡೆದವರಲ್ಲಿ ಈ ಪ್ರಮಾಣ ನಿರೀಕ್ಷಿತ ಮಟ್ಟದಲ್ಲಿ ಹೆಚ್ಚಾಗಿಲ್ಲ. ಆಸ್ಟ್ರಾಜೆನೆಕಾ ಲಸಿಕೆಯ 2ನೇ ಡೋಸ್ ಸ್ವೀಕರಿಸಿದವರಿಗಿಂತ ಹೆಚ್ಚು ಪ್ರತಿಕಾಯಗಳು ಫೈಜರ್ ಲಸಿಕೆ ಸ್ವೀಕರಿಸಿದವರಲ್ಲಿ ಏಳು ಪಟ್ಟು ಹೆಚ್ಚಾಗಿದೆ ಎಂದು ಕಂಡುಕೊಳ್ಳಲಾಗಿದೆ.
ಈ ಅಧ್ಯಯನಕ್ಕಾಗಿ ಆಸ್ಟ್ರಾಜೆನೆಕಾ ಲಸಿಕೆ ಪಡೆದ 18-59ರ ವಯೋಮಿತಿಯ 570 ಮಂದಿಯನ್ನು ಆಯ್ಕೆ ಮಾಡಲಾಗಿತ್ತು. ಫೈಜರ್ ಲಸಿಕೆ ಪಡೆದ 450 ಮಂದಿಯ ಮೇಲೆ ಅಧ್ಯಯನ ನಡೆಸಲಾಗಿದೆ. ಅವರ ಪೈಕಿ ಶೇ.1.7ರಷ್ಟು ಮಂದಿಗೆ ಮಾತ್ರ ಅಡ್ಡಪರಿಣಾಮ ಕಂಡುಬಂದಿದೆ. ತಲೆನೋವು, ಸ್ನಾಯುಗಳ ನೋವು, ಸಾಮಾನ್ಯ ಅಸ್ವಸ್ಥತೆಗಳು ಅವರಲ್ಲಿ ಕಾಣಿಸಿಕೊಂಡಿವೆ ಎಂದು ಅಧ್ಯಯನ ತಂಡದ ಸದಸ್ಯ ಡಾ| ಮ್ಯಾಗ್ಡಲೇನಾ ಕ್ಯಾಂಪಿನ್ಸ್ ಹೇಳಿದ್ದಾರೆ.
ಯುಕೆಯಲ್ಲಿ ಕೂಡ ಇದೇ ಮಾದರಿ ಅಧ್ಯಯನ ನಡೆಸಲಾಗಿದೆ. ಆಸ್ಟ್ರಾಜೆನೆಕಾ ಅಥವಾ ಫೈಜರ್ ಪಡೆದುಕೊಂಡವರಲ್ಲಿಯೂ ಪ್ರತಿಕೂಲ ಪರಿಣಾಮ ಅತ್ಯಲ್ಪ ಎಂದು ಕಂಡುಬಂದಿದೆ.
ರೂಪಾಂತರಿಗೆ ಫೈಜರ್, ಮಾಡೆರ್ನಾ ಪರಿಣಾಮಕಾರಿ: ಕೊರೊನಾ ವೈರಸ್‌ನ ಬಿ.1.617 ರೂಪಾಂತರಿಗೆ ಫೈಜರ್ ಮತ್ತು ಮಾಡೆರ್ನಾ ಅತ್ಯಂತ ಸೂಕ್ತ. ಅವುಗಳನ್ನು ನೀಡುವುದರಿಂದ ರೂಪಾಂತರಿ ವೈರಸ್ ಅನ್ನು ನಿಯಂತ್ರಿಸಬಹುದು ಎಂದು ನ್ಯೂಯಾರ್ಕ್ ವಿವಿಯ ಗ್ರಾಸ್‌ಮಾನ್ ಸ್ಕೂಲ್ ಆಫ್ ಮೆಡಿಸಿನ್‌ನ ವಿಜ್ಞಾನಿಗಳು ತಿಳಿಸಿದ್ದಾರೆ. ಇದೊಂದು ಕೇವಲ ಅಧ್ಯಯನದ ಮಾಹಿತಿಯಾಗಿದ್ದು, ಅದು ಯಾವುದೇ ವೈಜ್ಞಾನಿಕ ನಿಯತಕಾಲಿಕದಲ್ಲಿ ಪ್ರಕಟಗೊಂಡಿಲ್ಲ.
12 ದಿನಗಳಲ್ಲಿ ಮಕ್ಕಳ ಮೇಲೆ ಪ್ರಯೋಗ
2ರಿಂದ 18 ವರ್ಷ ವಯೋಮಿತಿಯ ಮಕ್ಕಳಿಗಾಗಿ ಭಾರತ್ ಬಯೋಟೆಕ್ ಸಂಶೋಧನೆ ನಡೆಸಿ, ಅಭಿವೃದ್ಧಿಪಡಿಸಿರುವ ಕೊವ್ಯಾಕ್ಸಿನ್ ಲಸಿಕೆಯ ಪ್ರಯೋಗವನ್ನು 10-12 ದಿನಗಳಲ್ಲಿ ಶುರು ಮಾಡಲಾಗುತ್ತದೆ. ಈ ಬಗ್ಗೆ ಮಂಗಳವಾರ ಮಾತನಾಡಿದ ನೀತಿ ಆಯೋಗದ ಸದಸ್ಯ ಡಾ. ವಿ.ಕೆ.ಪೌಲ್, ಭಾರತ್ ಬಯೋಟೆಕ್‌ನಲ್ಲಿ 2 ಮತ್ತು 3ನೇ ಹಂತದ ಪ್ರಯೋಗ ನಡೆಯಲಿದೆ ಎಂದರು. ಅಮೆರಿಕ ಮತ್ತು ಕೆನಡಾಗಳಲ್ಲಿ 12-15 ವರ್ಷದ ಮಕ್ಕಳಿಗೆ ಫೈಜರ್-ಬಯಾನ್‌ಟೆಕ್ ಲಸಿಕೆ ನೀಡಲು ಅನುಮತಿ ನೀಡಿರುವಂತೆಯೇ ಈ ನಿರ್ಧಾರ ಪ್ರಕಟವಾಗಿದೆ.
9 ತಿಂಗಳ ಬಳಿಕ ಲಸಿಕೆ
ಕೊರೊನಾ ಸೋಂಕಿನಿಂದ ಚೇತರಿಸಿಕೊಳ್ಳುತ್ತಿರುವವರು 6ರಿಂದ 9 ತಿಂಗಳ ಬಳಿಕ ಲಸಿಕೆ ಪಡೆದುಕೊಂಡರೆ ಸಾಕು. ಹೀಗೆಂದು ಲಸಿಕೆ ಬಗ್ಗೆ ಸಲಹೆ ನೀಡುವ ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿ (ಎನ್‌ಟಿಎಜಿಐ) ಕೇಂದ್ರ ಸರಕಾರಕ್ಕೆ ಮಂಗಳವಾರ ಶಿಫಾರಸು ಮಾಡಿದೆ. ಕೇಂದ್ರ ಆರೋಗ್ಯ ಸಚಿವಾಲಯ ಶಿಫಾರಸು ಅಂಗೀಕರಿಸಬೇಕೇ ಬೇಡವೇ ಎಂಬ ಬಗ್ಗೆ ಶೀಘ್ರವೇ ತೀರ್ಮಾನ ಕೈಗೊಳ್ಳಲಿದೆ.
28 ದಿನಗಳ ಕನಿಷ್ಠಕ್ಕೆ ದಿನವಹಿ ಸೋಂಕು
ದೇಶದಲ್ಲಿ ಸೋಮವಾರದಿಂದ ಮಂಗಳವಾರಕ್ಕೆ ಕೊರೊನಾ ಸೋಂಕಿನಿಂದ 4,329 ಮಂದಿ ಮೃತಪಟ್ಟಿದ್ದಾರೆ. ಸಮಾಧಾನಕರ ಅಂಶವೆಂದರೆ ಈ ಅವಧಿಯಲ್ಲಿ ದಿನವಹಿ ಸೋಂಕು ಸಂಖ್ಯೆ 2,63,533 ಆಗಿದೆ. 28 ದಿನಗಳಿಗೆ ಹೋಲಿಕೆ ಮಾಡಿದರೆ ಇದು ಅತ್ಯಂತ ಕನಿಷ್ಠ ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ. ಎ.20ರಂದು 2,59,170 ಕೇಸುಗಳು ದೃಢಪಟ್ಟಿದ್ದವು. ಸಕ್ರಿಯ ಸೋಂಕು ಸಂಖ್ಯೆ ಮತ್ತಷ್ಟು ಇಳಿಕೆಯಾಗಿದ್ದು, 33,53,765ಕ್ಕೆ ತಗ್ಗಿದೆ. ಚೇತರಿಕೆ ಪ್ರಮಾಣ ಶೇ.85.60ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಸೋಂಕು ಪ್ರಮಾಣ ಕಡಿಮೆಯಾಗುತ್ತಿದೆ. ಆದರೆ ಶೇ.98 ಮಂದಿ ಇನ್ನೂ ಸೋಂಕು ತಗಲುವ ಅಪಾಯದ ಅಂಚಿನಲ್ಲಿದ್ದಾರೆ.