ಮುಂಬೈ : ಮುಂಬೈ ವಿಮಾನ ನಿಲ್ದಾಣದಲ್ಲಿ ಏರ್ ಆಂಬುಲೆನ್ಸ್ ಒಂದನ್ನು ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡಲಾಗಿದೆ. ನಾಗ್ಪುರದಿಂದ ಹೈದರಾಬಾದ್ ಮಾರ್ಗವಾಗಿ ಸಂಚರಿಸುತ್ತಿದ್ದ ಏರ್ ಆಂಬುಲೆನ್ಸ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಹೀಗಾಗಿ ಮುಂಬೈ ಏರ್ ಪೋರ್ಟ್ ಕಡೆ ಮಾರ್ಗವನ್ನು ಬದಲಾಯಿಸಲಾಗಿದ್ದು, ಗುರುವಾರ ರಾತ್ರಿ ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡಲಾಯಿತು.
ಜೆಟ್ ವಿಮಾನಯಾನ ನಿರ್ವಹಿಸುತ್ತಿರುವ ಸಿ -90 ವಿಟಿ-ಜಿಐಎಲ್ ವಿಮಾನವು ಮುಂಬೈ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಮಾಡುವಲ್ಲಿ ಯಶಸ್ವಿಯಾಗಿದೆ. ಲ್ಯಾಂಡಿಂಗ್ ಗೇರ್ ಬಳಸದೆ ಪೈಲಟ್‌ಗಳು 'ಬೆಲ್ಲಿ ಲ್ಯಾಂಡಿಂಗ್' ಮಾಡಲು ಪ್ರಯತ್ನಿಸಿದ್ದಾರೆ ಎಂದು ಸಿಬ್ಬಂದಿ ತಿಳಿಸಿದ್ದಾರೆ.
ಏರ್ ಆಂಬುಲೆನ್ಸ್ ನಲ್ಲಿ ಒಬ್ಬ ರೋಗಿ, ಇಬ್ಬರು ಸಹಾಯಕರು, ವೈದ್ಯರು ಸೇರಿದಂತೆ ವೈದ್ಯಕೀಯ ತಂಡದ ಜೊತೆಗೆ ವಿಮಾನ ಸಿಬ್ಬಂದಿ ಇದ್ದರು. ಈ ಪೈಕಿ ಎಲ್ಲರೂ ಸುರಕ್ಷಿತವಾಗಿದ್ದು, ಯಾವುದೇ ರೀತಿಯ ಪ್ರಾಣಹಾನಿ ಸಂಭವಿಸಿಲ್ಲ. ಸದ್ಯಕ್ಕೆ ರೋಗಿಯನ್ನು ಮುಂಬೈ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ನಾಗ್ಪುರದಲ್ಲೇ ಕಳಚಿ ಬಿದ್ದ ವ್ಹೀಲ್:
ಪ್ರಾಥಮಿಕ ಮಾಹಿತಿಗಳ ಪ್ರಕಾರ, ನಾಗ್ಪುರದ ವಿಮಾನ ನಿಲ್ದಾಣದಲ್ಲಿ ಏರ್ ಆಂಬುಲೆನ್ಸ್ ಟೇಕ್ ಆಫ್ ಆಗುವ ಸಂದರ್ಭದಲ್ಲೇ ಅದರ ಒಂದು ಗಾಲಿ ಕಳಚಿ ಬಿದ್ದಿತ್ತು ಎಂದು ತಿಳಿದು ಬಂದಿದೆ. ಸಿ -90 ವಿಟಿ-ಜಿಐಎಲ್ ವಿಮಾನವನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಮಾಡಲಾಗಿದೆ. ಈ ಏರ್ ಆಂಬುಲೆನ್ಸ್ ನಲ್ಲಿ 2 ಸಿಬ್ಬಂದಿ, 1 ರೋಗಿ, 1 ರೋಗಿಯ ಸಂಬಂಧಿ ಹಾಗೂ ಒಬ್ಬ ವೈದ್ಯರು ಪ್ರಯಾಣಿಸುತ್ತಿದ್ದರು. ಏರ್ ಆಂಬುಲೆನ್ಸ್ ಒಂದು ಚಕ್ರವು ಕಳಚಿ ಬಿದ್ದಿರುವುದು ಬೆಳಕಿಗೆ ಬರುತ್ತಿದ್ದಂತೆ ರಾತ್ರಿ 9.09ರ ವೇಳೆಗೆ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಮಾಡಲಾಯಿತು ಎಂದು ತಿಳಿದು ಬಂದಿದೆ.