ತಿರುವನಂತಪುರ: ರಾಜ್ಯದಲ್ಲಿ ಲಾಕ್ ಡೌನ್ ಹಿಂತೆಗೆದುಕೊಳ್ಳುವ ಪರಿಸ್ಥಿತಿ ಈಗಿಲ್ಲ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಬುಧವಾರ ಹೇಳಿದ್ದಾರೆ. ಲಾಕ್ ಡೌನ್ ಸಂದರ್ಭದಲ್ಲಿ ಕೆಲವು ಪ್ರದೇಶಗಳಲ್ಲಿ ರಿಯಾಯಿತಿ ನೀಡುವ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಸಿಎಂ ಪ್ರತಿಕ್ರಿಯಿಸಿ ಮಾಹಿತಿ ನೀಡಿದರು.
ರಾಜ್ಯದಲ್ಲಿ ಕೊರೋನಾ ವಿಸ್ತರಣೆಯನ್ನು ನಿರ್ಣಯಿಸಿದ ನಂತರ ಲಾಕ್‍ಡೌನ್ ಹಿಂಪಡೆಯುವ ನಿರ್ಧಾರ ತೆಗೆದುಕೊಳ್ಳಲಾಗುವುದು. ಕೊರೋನಾ ಪ್ರಸರಣವನ್ನು ನಿಯಂತ್ರಿಸುವುದು ಮೊದಲ ಆದ್ಯತೆಯಾಗಿದೆ. ಸೋ|ಂಕು ಹೆಚ್ಚಿರುವ ಪ್ರದೇಶಗಳಲ್ಲಿ ರಿಯಾಯಿತಿಗಳನ್ನು ನೀಡಲಾಗುವುದಿಲ್ಲ. ಜನರ ದೈನಂದಿನ ಬದುಕಿನ ಸಮಸ್ಯೆಗಳ ಆಧಾರದ ಮೇಲೆ ರಿಯಾಯಿತಿಗಳನ್ನು ನಿರ್ಧರಿಸಲಾಗುವುದು ಎಂದು ಸಿಎಂ ಹೇಳಿದರು.
ಪ್ರಸ್ತುತ ಲಾಕ್ಡೌನ್ ಅನ್ನು 30 ರವರೆಗೆ ಘೋಷಿಸಲಾಗಿದೆ. ಸೆಕ್ರಟರಿಯೇಟ್ ಕಾರ್ಯಾಲಯದಲ್ಲಿ ಮೇ.31 ರಿಂದ 50 ರಷ್ಟು ಸಿಬ್ಬಂದಿ ಹಾಜರಿರಬೇಕು ಎಂದು ನಿರ್ಧರಿಸಲಾಗಿದೆ. ಎಲ್ಲಾ ಇಲಾಖೆಗಳ ಸಂಸದೀಯ ವಿಭಾಗದ ಅಧಿಕಾರಿಗಳು ಮತ್ತು ಅಂಡರ್ ಸೆಕ್ರೆಟರಿಯಿಂದ ಕಾರ್ಯದರ್ಶಿಯವರೆಗೆ ಮೇ 28 ರಿಂದ ಕೆಲಸದ ದಿನಗಳಲ್ಲಿ ಕಚೇರಿಗಳಲ್ಲಿ ಮತ್ತು ವಿಧಾನಸಭೆ ಅಧಿವೇಶನದಲ್ಲಿ ಹಾಜರಿರಬೇಕು ಎಂದು ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಕೊರೋನಾ ಮಾನದಂಡಗಳಿಗೆ ಅನುಗುಣವಾಗಿ ಆಹಾರೋತ್ಪನ್ನ ತಯಾರಿ ಮಿಲ್ಲುಗಳ ಕಾರ್ಯನಿರ್ವಹಣೆಗೆ ಅನುಮತಿಸಲಾಗುವುದು. ರಸಗೊಬ್ಬರ ಮತ್ತು ಕೀಟನಾಶಕ ಅಂಗಡಿಗಳು ವಾರದಲ್ಲಿ ಒಂದು ದಿನ ಕಾರ್ಯನಿರ್ವಹಿಸುತ್ತವೆ. ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಅಂತಿಮ ಸೆಮಿಸ್ಟರ್ ಪರೀಕ್ಷೆಯನ್ನು ಆನ್‍ಲೈನ್‍ನಲ್ಲಿ ನಡೆಸಲು ನಿರ್ಧರಿಸಲಾಗಿದೆ ಎಂದರು.
ಪರೀಕ್ಷೆಯನ್ನು ಆಫ್‍ಲೈನ್‍ನಲ್ಲಿ ನಡೆಸುವುದು ಸೂಕ್ತ ಎಂದು ವಿಶ್ವವಿದ್ಯಾಲಯದ ಉಪಕುಲಪತಿಗಳ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಸಿಎಂ ಹೇಳಿದರು. ನಿರ್ಬಂಧಗಳನ್ನು ಹಿಂಪಡೆದ ಬಳಿಕ ಜೂನ್ 15 ರಿಂದ ಪರೀಕ್ಷೆಗಳು ಪ್ರಾರಂಭವಾಗುತ್ತವೆ ಎಂದು ವಿಸಿಗಳು ಅಭಿಪ್ರಾಯಪಟ್ಟಿದ್ದಾರೆ. ಅದಕ್ಕೆ ತಕ್ಕಂತೆ ಪರೀಕ್ಷೆ ಪ್ರಾರಂಭಿಸಲಾಗುವುದು ಎಂದು ಸಿಎಂ ಹೇಳಿದರು.