ನವದೆಹಲಿ: ಕೋವಿಡ್-19 ಲಸಿಕೆಗಳ ಉತ್ಪಾದನೆಯನ್ನು ಹೆಚ್ಚಿಸಲು ಸತತ ಪ್ರಯತ್ನ ನಡೆದಿದ್ದು, ನಿಗದಿಗಿಂತ 15 ದಿನ ಮೊದಲೇ ರಾಜ್ಯಗಳಿಗೆ ಲಸಿಕೆಗಳನ್ನು ಪೂರೈಕೆ ಮಾಡಲು ಉದ್ದೇಶಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದರು.
ದೇಶದ ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ 9 ರಾಜ್ಯಗಳ 46 ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ನಡೆಸಿದ ವರ್ಚುವಲ್ ಸಭೆಯಲ್ಲಿ ಅವರು ಈ ವಿಷಯ ತಿಳಿಸಿದರು.
'ನಿಗದಿತ ಸಮಯಕ್ಕಿಂತ 15 ದಿನ ಮೊದಲೇ ಲಸಿಕೆಯನ್ನು ಪೂರೈಸುವುದರಿಂದ, ಲಸಿಕಾ ಕಾರ್ಯಕ್ರಮವನ್ನು ಮತ್ತಷ್ಟು ವ್ಯವಸ್ಥಿತವಾಗಿ ಆಯೋಜಿಸಲು ರಾಜ್ಯಗಳಿಗೆ ಸಾಧ್ಯವಾಗಲಿದೆ' ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದರು.
'ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಲಸಿಕೆ ದೊಡ್ಡ ಅಸ್ತ್ರ. ಆದರೆ, ಲಸಿಕೆ ಕುರಿತು ಜನರಲ್ಲಿ ಕೆಲವರು ಅಪನಂಬಿಕೆ ಬಿತ್ತುತ್ತಿದ್ದಾರೆ. ಸಾಂಘಿಕ ಪ್ರಯತ್ನದಿಂದ ಇಂತಹ ಪ್ರಯತ್ನಗಳನ್ನು ವಿಫಲಗೊಳಿಸಲು ಸಾಧ್ಯ' ಎಂದರು.
'ಪರೀಕ್ಷೆ, ಸೋಂಕಿತರ ಸಂಪರ್ಕಕ್ಕೆ ಬಂದವರ ಪತ್ತೆ ಹಚ್ಚುವುದು ಹಾಗೂ ಕೋವಿಡ್-19 ಹಿನ್ನೆಲೆಯಲ್ಲಿ ಜಾರಿಗೊಳಿಸಿರುವ ನಿಯಮಗಳನ್ನು ಪಾಲಿಸುವುದು ಮುಖ್ಯ. ಈ ಕ್ರಮಗಳಿಂದ ಸೋಂಕು ಪ್ರಸರಣವನ್ನು ಪರಿಣಾಮಕಾರಿಯಾಗಿ ತಡೆಯಬಹುದು' ಎಂದು ಪ್ರತಿಪಾದಿಸಿದರು.
'ಎಲ್ಲ ಹಂತದ ಅಧಿಕಾರಿಗಳು ಈ ಸೋಂಕಿನ ವಿರುದ್ಧದ ಹೋರಾಟದಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಕೆಲವು ಅಧಿಕಾರಿಗಳು ಸ್ವತಃ ಕೋವಿಡ್-19 ಪೀಡಿತರಾಗಿದ್ದರು, ಕೆಲವರು ತಮ್ಮ ಕುಟುಂಬದ ಸದಸ್ಯರನ್ನು ಕಳೆದುಕೊಂಡರು. ಆದರೆ, ಅವರಾರೂ ಧೃತಿಗೆಡದೇ ಕೋವಿಡ್-19 ವಿರುದ್ಧದ ಹೋರಾಟಕ್ಕೆ ಆದ್ಯತೆ ನೀಡಿದರು' ಎಂದು ಶ್ಲಾಘಿಸಿದರು.
'ಆಯಾ ಸ್ಥಳೀಯ ಸಂದರ್ಭಗಳಿಗೆ ಹೊಂದುವ, ನವೀನ ರೀತಿಯ ಕ್ರಮಗಳನ್ನು ಕೈಗೊಳ್ಳಲು ನೀವು ಸ್ವತಂತ್ರರು. ಈಗ ಜಾರಿಗೊಳಿಸಿರುವ ನೀತಿಯಲ್ಲಿ ಏನಾದರೂ ಬದಲಾವಣೆಗಳು ಅಗತ್ಯವಿದೆ ಎಂದು ಅನಿಸಿದಲ್ಲಿ, ಯಾವುದೇ ಹಿಂಜರಿಕೆ ಇಲ್ಲದೇ ತಿಳಿಸಬೇಕು' ಎಂದು ಅವರು ಅಧಿಕಾರಿಗಳನ್ನು ಉದ್ದೇಶಿಸಿ ಹೇಳಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಕೆಲವು ರಾಜ್ಯಗಳ ಮುಖ್ಯಮಂತ್ರಿಗಳು ಪಾಲ್ಗೊಂಡಿದ್ದರು.