ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿನ ಭೀತಿ ವ್ಯಾಪಕವಾಗಿರುವ ಸಂದರ್ಭದಲ್ಲೇ ಕಪ್ಪು ಶಿಲೀಂಧ್ರ(ಮ್ಯೂಕೋಮೈಕೋಸಿಸ್ ಅಥವಾ ಬ್ಲ್ಯಾಕ್ ಫಂಗಸ್) ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದು ವೈದ್ಯಲೋಕವನ್ನು ಚಿಂತೆಗೀಡು ಮಾಡಿದೆ. ಅತಿಯಾದ ಸ್ಟೆರಾಯಿಡ್‌ಗಳ ಬಳಕೆ ಮತ್ತು ಅನಿಯಂತ್ರಿತ ಮಧುಮೇಹವು ಕೊರೊನಾ ಸೋಂಕಿತರಲ್ಲಿ ಕಪ್ಪು ಶಿಲೀಂಧ್ರ ಕಾಣಿಸಿಕೊಳ್ಳಲು ಪ್ರಮುಖ ಕಾರಣವೆಂದು ತಜ್ಞ ವೈದ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ವಿಚಾರವಾಗಿ ಮಾಧ್ಯಮಗೋಷ್ಠಿ ನಡೆಸಿರುವ ಏಮ್ಸ್ ನಿರ್ದೇಶಕ ರಣದೀಪ್ ಗುಲೇರಿಯಾ, 'ಅತಿಯಾದ ಸ್ಟೆರಾಯಿಡ್‌ಗಳ ಬಳಕೆ ಮತ್ತು ಅನಿಯಂತ್ರಿತ ಮಧುಮೇಹವು ಕೊರೊನಾ ಸೋಂಕಿತರಲ್ಲಿ ಕಪ್ಪು ಶಿಲೀಂಧ್ರ ಕಾಣಿಸಿಕೊಳ್ಳಲು ಪ್ರಮುಖ ಕಾರಣವಾಗಿದೆ. ಮಧುಮೇಹ ಹೊಂದಿರುವ ಕೋವಿಡ್ ರೋಗಿಗಳು ಸ್ಟೆರಾಯಿಡ್‌ಗಳನ್ನು ತೆಗೆದುಕೊಳ್ಳುವುದರಿಂದ ಕಪ್ಪು ಶಿಲೀಂಧ್ರ ಸೋಂಕಿಗೆ ಒಳಗಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ. ಇದನ್ನು ತಡೆಗಟ್ಟಲು ಅತಿಯಾದ ಸ್ಟೆರಾಯಿಡ್‌ಗಳ ಬಳಕೆಯನ್ನು ನಿಲ್ಲಿಸಬೇಕಿದೆ,' ಎಂದು ಹೇಳಿದ್ದಾರೆ.
ಮೂಗು, ಕಣ್ಣು ಅಥವಾ ಮೆದುಳಿನ ಕಕ್ಷೆಗೆ ಕಪ್ಪು ಶಿಲೀಂಧ್ರ ಸೋಂಕು ತಗುಲುತ್ತದೆ. ಇದು ದೃಷ್ಟಿ ಹೀನತೆಗೂ ಕಾರಣವಾಗಬಹುದು. ಶ್ವಾಸಕೋಶಕ್ಕೂ ಹರಡಿ ಸೋಂಕಿತರ ಪ್ರಾಣಕ್ಕೆ ಅಪಾಯವನ್ನೂ ತಂದೊಡ್ಡಬಹುದು ಎಂದು ವೈದ್ಯರು ತಿಳಿಸಿದ್ದಾರೆ.
'ವಿವೇಚನೆಯಿಲ್ಲದೆ ಕೋವಿಡ್ ಸೋಂಕಿತರಿಗೆ ಸ್ಟೆರಾಯಿಡ್‌ಗಳ ನೀಡಬಾರದು. ಕೋವಿಡ್ ಸೋಂಕಿತರ ಮಧುಮೇಹವನ್ನು ಪರೀಕ್ಷಿಸಿದ ನಂತರವಷ್ಟೇ ಸ್ಟೆರಾಯಡ್‌ಗಳ ಬಳಕೆ ಬಗ್ಗೆ ಯೋಚಿಸಬೇಕು' ಎಂದು ನೀತಿ ಆಯೋಗದ ಸದಸ್ಯ ವಿ.ಕೆ.ಪೌಲ್ ಎಚ್ಚರಿಸಿದ್ದಾರೆ.
ಕೋವಿಡ್-19 ವಿರುದ್ಧ ಸ್ಟೆರಾಯಿಡ್ ಮತ್ತು ಹೆಪಟೈಟಿಸ್-ಸಿ ಔಷಧಗಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿವೆ ಎಂದು ಜರ್ನಲ್ ಆಫ್ ದಿ ಅಮೆರಿಕ ಮೆಡಿಕಲ್ ಅಸೋಸಿಯೇಶನ್‌ನಲ್ಲಿ ಪ್ರಕಟವಾದ ಸಂಶೋಧನಾ ವರದಿ ಹೇಳಿತ್ತು.
ಯಾವುದೇ ಸ್ಟೆರಾಯಿಡ್ ಬಳಸಿದರೂ ಕೋವಿಡ್ ಸೋಂಕಿತರ ಸಾವಿನ ಪ್ರಮಾಣವನ್ನು ಶೇ 20ರಷ್ಟು ತಗ್ಗಿಸಬಹುದು ಎಂದು ಸಂಶೋಧಕರು ಹೇಳಿದ್ದರು. ಈ ಚಿಕಿತ್ಸೆ ವಿಧಾನವನ್ನು ಅನುಸರಿಸಲು ಶಿಫಾರಸು ಮಾಡುವಂತೆ ವಿಶ್ವ ಆರೋಗ್ಯ ಸಂಸ್ಥೆಗೆ ಅವರು ಮನವಿಯನ್ನೂ ಸಹ ಮಾಡಿದ್ದರು.