ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲೂ ಜನಜಾಗೃತಿ ಮೂಡಿಸುತ್ತಿರುವ ಆರೋಗ್ಯ ಇಲಾಖೆಯ ಅಭಿಯಾನ ಗಮನ ಸೆಳೆಯುತ್ತಿದೆ.
ಕಾಸರಗೋಡು ಜಿಲ್ಲಾ ಮಟ್ಟದ ಐ.ಇ.ಸಿ. ಸಂಚಲನ ಸಮಿತಿಯ ಅಂಗವಾಗಿ ಆರೋಗ್ಯ ಇಲಾಖೆಯ ಜಿಲ್ಲಾ ಮಾಸ್ ಮೀಡಿಯಾ ವಿಭಾಗ ಆರಂಭಿಸಿರುವ "ಜಾಗೃತಿ ಹೆಚ್ಚಿಸಿರಿ; ಕೋವಿಡ್ ನಿವಾರಿಸಿ" ಎಂಬ ಸಂದೇಶದೊಂದಿಗಿನ ಜಾಗೃತಿ ಅಭಿಯಾನ ಇದಾಗಿದೆ. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ಆದೇಶ ಪ್ರಕಾರ ಈ ಅಭಿಯಾನ ನಡೆಯುತ್ತಿದೆ.
ಕೋವಿಡ್ ಹೆಚ್ಚಳದೊಂದಿಗೆ, ಲಾಕ್ ಡೌನ್ ಅವಧಿಯ ಕಟ್ಟುನಿಟ್ಟುಗಳ ನಡುವೆ ದುಸ್ತರ ಬದುಕಿನ ಅನುಭವ ತಿಳಿಸುವ ಮತ್ತು ಇಂಥಾ ದುಸ್ಥಿತಿಯಲ್ಲೂ ಕೈಗೊಳ್ಳಬೇಕಾದ ನಿಯಂತ್ರಣಗಳ ಕುರಿತಾದ ಕಿರು ವೀಡಿಯೋಗಳನ್ನು ಸಮಾಜದ ಮುಂದಿರಿಸಲಾಗುತ್ತಿದೆ. ಮೀನುಗಾರರು, ಕೃಷಿಕರು, ಹಾಲು ಉತಪಾದಕರು, ಚಪ್ಪರ ಕೆಲಸಗಾರರು, ವೀಡಿಯೋ ಗ್ರಾಫರ್ ಗಳು, ಶಾಲಾ ವಿದ್ಯಾರ್ಥಿಗಳು, ದೈವಕೋಲ ಕಲಾವಿದರು ಮೊದಲಾದವರು ಈ ವೀಡಿಯೋದಲ್ಲಿ ಸಂದೇಶ ನೀಡುತ್ತಿದ್ದಾರೆ. ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯವಿದ್ದು, ಅತ್ಯಂತ ಜನಪ್ರಿಯವಾಗಿವೆ. ಸ್ವಂತ ಅನುಭವಗಳನ್ನು ಹಂಚಿಕೊಳ್ಳುವುದರ ಜೊತೆಗೆ ಸಮಾಜಕ್ಕೆ ಜಾಗೃತಿ ಮೂಡಿಸುವ ಸಂದೇಶಗಳನ್ನೂ ಕಿರುಚಿತ್ರಗಳಲ್ಲಿ ಬರುವ ಮಂದಿ ನೀಡುತ್ತಾರೆ.
ಜಿಲ್ಲಾ ಮಾಸ್ ಮಿಡಿಯಾ ಅಧಿಕಾರಿ ಅಬ್ದುಲ್ ಲತೀಫ್ ಮಠತ್ತಿಲ್, ಸಹಾಯಕ ಮಾಸ್ ಮೀಡಿಯಾ ಅಧಿಕಾರಿ ಸಯನಾ ಎಸ್., ಕಿರಿಯ ಆರೋಗ್ಯ ಇನ್ಸ್ ಪೆಕ್ಟರ್ ಪಿ.ವಿ.ಮಹೇಶ್ ಕುಮಾರ್, ಶ್ರೀಜಿತ್ ಕರಿವೆಳ್ಳೂರು, ಜಯನ್ ಪಿ.ಪಿ. ಮೊದಲಾದವರು ಈ ಕಿರುಚಿತ್ರ ನಿರ್ಮಾಣದ ಹಿನ್ನೆಲೆಯಲ್ಲಿ ದುಡಿದಿದ್ದಾರೆ.