ನವದೆಹಲಿ: ಕೋವಿಡ್ 19 ನಂತರದ ಸೋಂಕನ್ನು ಬ್ಲ್ಯಾಕ್ ಫಂಗಸ್ ಎಂದು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂದು ತಜ್ಞರು ಹೇಳಿದ್ದಾರೆ.
ಕೋವಿಡ್-19 ನಿಂದ ಚೇತರಿಸಿಕೊಂಡವರಲ್ಲಿ ಕೋವಿಡ್ ಅಸೋಸಿಯೇಟೆಡ್ ಮ್ಯೂಕೋರ್ಮೈಕೋಸಿಸ್ ಪ್ರಕರಣಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ದೆಹಲಿಯ ಏಮ್ಸ್ ನಲ್ಲಿರುವ ತಜ್ಞರು ಮಾಹಿತಿ ನೀಡಿದ್ದಾರೆ.
ತಜ್ಞರು ಹೇಳುವ ಪ್ರಕಾರ ಕೋವಿಡ್-19 ನಂತರದ ಸೋಂಕುಗಳನ್ನು ಬ್ಲ್ಯಾಕ್ ಫಂಗಸ್ ಎಂದು ತಪ್ಪಾಗಿ ಹೇಳಲಾಗುತ್ತಿದೆ. ಹಲವು ರಾಜ್ಯಗಳಲ್ಲಿ ಮ್ಯೂಕಾರ್ಮೈಕೋಸಿಸ್ ಫಂಗಸ್ ಪ್ರಕರಣಗಳು ವರದಿಗಳಾಗುತ್ತಿದ್ದು, ಈ ಬಳಿಕ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಕಳೆದ ವಾರ ಫಂಗಲ್ ಸೋಂಕಿನ ಬಗ್ಗೆ ವಿವರಗಳನ್ನು ಹಂಚಿಕೊಂಡಿದ್ದರು. ಈ ಮಾದರಿಯ ಸೋಂಕಿಗೆ ಚಿಕಿತ್ಸೆ ನೀಡುವುದಕ್ಕೆ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಸಚಿವರು ಹೇಳಿದ್ದಾರೆ.
ಬ್ಲ್ಯಾಕ್ ಫಂಗಸ್ ವಾಸ್ತವದಲ್ಲಿ ಡಿಮ್ಯಾಟಿಯೇಶಿಯಸ್ ಆಗಿದೆ, ಅದು ಮ್ಯೂಕೋರ್ಮೈಕೋಸಿಸ್ ಅಲ್ಲ. ಮ್ಯೂಕೋರ್ಮೈಕೋಸಿಸ್ ನಿಂದ ಉಂಟಾಗುತ್ತಿರುವ ರೋಗ ಬ್ಲಾಕ್ ಫಂಗಸ್ ಎನ್ನುವುದಕ್ಕೆ ಯಾವುದೇ ವೈಜ್ಞಾನಿಕ ಪ್ರಕಟಣೆ ಇಲ್ಲ ಎಂದು ಏಮ್ಸ್ ನಲ್ಲಿ ನರಶಸ್ತ್ರಚಿಕಿತ್ಸಾ ವಿಭಾಗದ ಪ್ರೊಫೆಸರ್ ಆಗಿರುವ ದೀಪಕ್ ಗುಪ್ತಾ ಮಾಹಿತಿ ನೀಡಿದ್ದಾರೆ.
ಕೋವಿಡ್ ನಂತರ ಕಾಣಿಸಿಕೊಳ್ಳುತ್ತಿರುವ ಮ್ಯೂಕಾರ್ಮೈಕೋಸಿಸ್ ಫಂಗಸ್‌ಗೆ ಮ್ಯೂಕರ್ ಶಿಲೀಂಧ್ರ ಕಾರಣವಾಗಿದ್ದು, ಮಣ್ಣು, ಸಗಣಿ, ಕೊಳೆಯುತ್ತಿರುವ ಮರಗಳಲ್ಲಿ ಕಾಣಿಸಿಕೊಳ್ಳುತ್ತದೆ. ಆರೋಗ್ಯವಂತ ಜನರ ಮೂಗು ಮತ್ತು ಸಿ೦ಬಳದಲ್ಲಿಯೂ ಈ ಮ್ಯೂಕರ್ ಶಿಲೀಂಧ್ರ ಕಾಣಿಸಿಕೊಳ್ಳುತ್ತದೆ.
ಸಿಎಎಂ ನ್ನು ಆರ್ ಒಸಿಎಂ (ರೈನೋಆರ್ಬಿಟಲ್ ಸೆರೆಬ್ರಲ್ ಮ್ಯೂಕಾರ್ಮೈಕೋಸಿಸ್) ಎಂದೂ ಹೇಳುತ್ತಾರೆ, ಇದು ಬ್ಲಾಕ್ ಫಂಗಸ್ ಅಲ್ಲ. ಡಿಮ್ಯಾಟಿಯೇಶಿಯಸ್ ಹೈಫೋಮೈಸೆಟ್ಸ್ ಫಿಯೋಹೈಫೋಮೈಕೋಸಿಸ್‌ಗೆ ಕಾರಣವಾಗುತ್ತದೆ.