ಚೆನ್ನೈ: ನಮ್ಮದು ಮುಸ್ಲಿಂ ಪ್ರಾಬಲ್ಯ ಇರುವ ಪ್ರದೇಶ. ಅಲ್ಲಿ ಹಿಂದೂಗಳು ಮೆರವಣಿಗೆ ಮಾಡಬಾರದು, ನಮ್ಮ ಏರಿಯಾದಲ್ಲಿ ಹಿಂದೂಗಳು ಅಲ್ಪ ಪ್ರಮಾಣದಲ್ಲಿ ಇದ್ದು, ಆ ಪ್ರದೇಶದಲ್ಲಿ ಅವರ ಮೆರವಣಿಗೆ ನಿಷೇಧ ಮಾಡಬೇಕು ಎಂದು ಕೆಲ ಮುಸ್ಲಿಂ ಮುಖಂಡರು ಸಲ್ಲಿಸಿದ್ದ ಅರ್ಜಿಗೆ ಮದ್ರಾಸ್ ಹೈಕೋರ್ಟ್ ಕಿಡಿ ಕಾರಿದೆ.
ಕಲತ್ತೂರ್ ಪೆರಂಬಲೂರಿನಲ್ಲಿ ಮುಸ್ಲಿಂ ಪ್ರಾಬಲ್ಯ ಇದೆ. ಇದು ಹಿಂದೂ ಅಲ್ಪಸಂಖ್ಯಾತ ಪಟ್ಟಣ. ಆದ್ದರಿಂದ ಅವರ ಮೆರವಣಿಗೆಯನ್ನು ಇಲ್ಲಿ ನಡೆಸಬಾರದು, ಇದನ್ನು ಬ್ಯಾನ್ ಮಾಡಲು ಸರ್ಕಾರಕ್ಕೆ ಆದೇಶಿಸಿ ಎಂದು ಸಲ್ಲಿಸಿದ್ದ ಅರ್ಜಿ ಇದಾಗಿತ್ತು.
ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎನ್ ಕಿರುಬಕರನ್ ಮತ್ತು ಪಿ ವೆಲ್ಮುರುಗನ್ ಅವರ ಪೀಠ ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಅರ್ಜಿದಾರರನ್ನು ತರಾಟೆಗೆ ತೆಗೆದುಕೊಂಡಿತು.
ಒಂದು ವೇಳೆ ಇದೇ ರೀತಿ ಹಿಂದೂಗಳು ಯೋಚನೆ ಮಾಡಿದ್ದರೆ, ಅಲ್ಪಸಂಖ್ಯಾತ ಜನರು ಭಾರತದ ಹೆಚ್ಚಿನ ಪ್ರದೇಶಗಳಲ್ಲಿ ಯಾವುದೇ ಉತ್ಸವ ಅಥವಾ ಮೆರವಣಿಗೆಯನ್ನು ನಡೆಸಬಾರದು ಎಂದು ಅವರೂ ಯೋಚನೆ ಮಾಡಿದ್ದರೆ, ನಿಮ್ಮ ಸ್ಥಿತಿ ಹೇಗಿರುತ್ತಿತ್ತು ಎಂದು ಊಹಿಸಿರುವಿರಾ? ಪರಿಸ್ಥಿತಿ ಯಾವ ರೀತಿ ಸೃಷ್ಟಿಯಾಗಿರುತ್ತಿತ್ತು ಎಂಬುದನ್ನು ಬಲ್ಲಿರಾ ಎಂದು ಪೀಠ ಪ್ರಶ್ನಿಸಿತು.
2012ರಿಂದ ಹಿಂದೂ ಮೆರವಣಿಗೆಯನ್ನು ಈ ಪ್ರದೇಶಗಳಲ್ಲಿ ವಿರೋಧಿಸಲಾಗುತ್ತಿದೆ. ಇಸ್ಲಾಮಿಕ್ ಮೂಲಭೂತವಾದಿಗಳು ಹಿಂದೂ ಹಬ್ಬಗಳನ್ನು 'ಪಾಪದ ಆಚರಣೆ' ಎಂದು ಕರೆಯುತ್ತಾರೆ ಎಂದು ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿಗಳ ಗಮನಕ್ಕೆ ಬಂದು ತೀವ್ರವಾಗಿ ಅಸಮಾಧಾನ ಪಟ್ಟರು.
ಇಂತಹ ಬೇಡಿಕೆಗಳನ್ನು ಮಾಡುವ ಮೂಲಕ ಮುಸ್ಲಿಮರು ತಮ್ಮ ಪ್ರಾಬಲ್ಯವನ್ನು ಸ್ಥಾಪಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು. ಮುಸ್ಲಿಂ ಸಮುದಾಯವು ಒಂದು ನಿರ್ದಿಷ್ಟ ಪ್ರದೇಶದಲ್ಲಿ ಪ್ರಾಬಲ್ಯ ಹೊಂದಿರುವುದರಿಂದ, ಮತ್ತೊಂದು ಧಾರ್ಮಿಕ ಸಮುದಾಯವು ಹಬ್ಬಗಳನ್ನು ಆಚರಿಸುವುದನ್ನು ಅಥವಾ ಆ ಪ್ರದೇಶದ ಬೀದಿಗಳಲ್ಲಿ ಮೆರವಣಿಗೆ ಮಾಡುವುದನ್ನು ತಡೆಯಲು ಸಾಧ್ಯವಿಲ್ಲ. ಒಂದು ನಿರ್ದಿಷ್ಟ ಧಾರ್ಮಿಕ ಪಂಥದ ಅಸಹಿಷ್ಣುತೆಯಿಂದಾಗಿ ದಶಕಗಳಿಂದ ಒಟ್ಟಿಗೆ ನಡೆಯುವ ಹಬ್ಬಗಳನ್ನು ನಿಷೇಧಿಸಲಾಗುವುದಿಲ್ಲ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯ ಪಟ್ಟು ಅರ್ಜಿಯನ್ನು ವಜಾ ಮಾಡಿದರು.
' ಧಾರ್ಮಿಕ ಅಸಹಿಷ್ಣುತೆಯನ್ನು ಅನುಮತಿಸಿದರೆ, ಅದು ಜಾತ್ಯತೀತ ದೇಶಕ್ಕೆ ಒಳ್ಳೆಯದಲ್ಲ. ಯಾವುದೇ ರೀತಿಯ ಅಸಹಿಷ್ಣುತೆಯನ್ನು ಮುಸ್ಲಿಂ ಸಮುದಾಯವು ತ್ಯಜಿಸಬೇಕು ಮತ್ತು ಧಾರ್ಮಿಕ ಸಂಕುಚಿತ ಮನೋಭಾವದಿಂದ ಹಾಗೂ ಹೀಗೆ ಪರಸ್ಪರ ಕಚ್ಚಾಟವು ಸಂಘರ್ಷ ಮತ್ತು ಗಲಭೆಗಳಿಗೆ ಕಾರಣವಾಗಬಾರದು, ಅಪಾರ ಪ್ರಾಣಹಾನಿ, ಆಸ್ತಿಪಾಸ್ತಿಗೆ ನಷ್ಟ ಉಂಟಾಗಬಹುದು ಎಂದು ಕೋರ್ಟ್ ಅಭಿಪ್ರಾಯ ಪಟ್ಟಿದೆ.