ತಿರುವನಂತಪುರ: ರಾಜ್ಯಾದ್ಯಂತ ಕೊರೋನಾ ಭೀತಿಯ ಮಧ್ಯೆ ಭದ್ರತಾ ಮಾನದಂಡಗಳನ್ನು ಉಲ್ಲಂಘಿಸಿ ನಿನ್ನೆ ತಿರುವನಂತಪುರಂನಲ್ಲಿ ಎಲ್.ಡಿ.ಎಫ್ ಆಯೋಜಿಸಿದ್ದ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಅಭೂತಪೂರ್ವ ಗೆಲುವಿನ ಹಿನ್ನೆಲೆಯ ವಿಜಯೋತ್ಸವ ಆಚರಿಸಿರುವುದು ವ್ಯಾಪಕ ಟೀಕೆಗೊಳಗಾಗಿದೆ. ತಿರುವನಂತಪುರದÀಲ್ಲಿ ಪ್ರಸ್ತುತ ಟ್ರಿಪಲ್ ಲಾಕ್ ಡೌನ್ ಜಾರಿಯಲ್ಲಿದೆ. ಕೊರೋನಾ ವಿಸ್ತರಣೆ ತೀವ್ರವಾಗಿದೆ.
ಸಮಾರಂಭದಲ್ಲಿ ಕೇಕ್ ಕತ್ತರಿಸಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಚಾಲನೆ ನೀಡಿದರು. ಈ ಕಾರ್ಯಕ್ರಮದಲ್ಲಿ ಪಣ್ಯನ್ ರವೀಂದ್ರನ್ ಸೇರಿದಂತೆ ಹಿರಿಯ ನಾಯಕರು ಭಾಗವಹಿಸಿದ್ದರು. ಎಲ್‍ಡಿಎಫ್ ನಾಯಕರು ಸಾಮಾಜಿಕ ದೂರವನ್ನು ಇಟ್ಟುಕೊಳ್ಳದೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ವ್ಯಾಪಕ ಆಕ್ರೋಶ, ಟೀಕೆಗೆ ಕಾರಣವಾಗಿದೆ.
ಕೊರೋನಾ ರೋಗಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲೇನೂ ಕಡಿಮೆಯಾಗಿಲ್ಲ. ಕಳೆದ ನಾಲ್ಕೈದು ವಾರಗಳಿಂದ 25 ಸಾವಿರಕ್ಕಿಂತಲೂ ಹೆಚ್ಚಿದ ಸೋಂಕು ಪ್ರಕರಣ ಸೋಮವಾರವಷ್ಟೇ ಕಡಿಮೆ ಸಂಖ್ಯೆಯಲ್ಲಿ ದಾಖಲಾಗಿದೆ. ಕಾರ್ಯಕ್ರಮಗಳಲ್ಲಿ 20 ಕ್ಕಿಂತ ಹೆಚ್ಚು ಜನರು ಹಾಜರಾಗಬಾರದು ಎಂಬ ಷರತ್ತು ಜಾರಿಯಲ್ಲಿವೆ. ಆದರೆ ವಿಜಯೋತ್ಸವದಲ್ಲಿ 20 ಕ್ಕಿಂತಲೂ ಹೆಚ್ಚು ಜನರು ಭಾಗವಹಿಸಿರುವುದು ಜಗಜ್ಜಾಹೀರುಗೊಂಡಿದೆ. . ಮನೆಗಳಲ್ಲೂ ಸಾಮಾಜಿಕ ದೂರ ಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಪದೇ ಪದೇ ಹೇಳಿರುವ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಇಂತಹ ಕಾನೂನು ಉಲ್ಲಂಘನೆಯಾಗಿರುವುದು ಆಶ್ಚರ್ಯಕ್ಕೆಡೆಮಾಡಿದೆ. ಏತನ್ಮಧ್ಯೆ, ಸಮಾರಂಭದ ಚಿತ್ರಗಳು ಜಾಲತಾಣಗಳಲ್ಲಿ ಹರಡುತ್ತಿದ್ದಂತೆ ವ್ಯಾಪಕ ಪ್ರತಿಭಟನೆಗಳು ಭುಗಿಲೆದ್ದವು.
ಈ ಹಿಂದೆ ಸುಮಾರು 800 ಜನರ ಭಾಗವಹಿಸುವಿಕೆಯೊಂದಿಗೆ ಪ್ರಮಾಣವಚನ ಸಮಾರಂಭವನ್ನು ನಡೆಸಲು ಸರ್ಕಾರದ ನಿರ್ಧಾರ ಹೆಚ್ಚು ವಿವಾದಾತ್ಮಕವಾಗಿತ್ತು. ನಿರಂತರ ಟೀಕೆಗಳ ನಡುವೆ ಭದ್ರತಾ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ವಿಜಯೋತ್ಸವವನ್ನು ನಡೆಸಲಾಗಿರುವುದು ಪಕ್ಷದ ಇಬ್ಬಗೆ ನೀತಿಯ ಸಂಕೇತವೆಂದೇ ಹೇಳಲಾಗಿದೆ.