ತೀವ್ರ ಕುತೂಹಲ ಕೆರಳಿಸಿದ್ದ ನಾಲ್ಕು ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾಗಿ ಹೊಸ ಆಡಳಿತ ಸಮಿತಿಗಳು ಆಡಳಿತಕ್ಕೆ ಬಂದಿವೆ. ಪಶ್ಚಿಮ ಬಂಗಾಳ, ಅಸ್ಸಾಂ, ಕೇರಳದಲ್ಲಿ ಆಡಳಿತಾರೂಢ ಪಕ್ಷಗಳೇ ಗೆಲುವಿನ ನಗೆಬೀರಿವೆ. ತಮಿಳುನಾಡಿನಲ್ಲಿ ಎಐಎಡಿಎಂಕೆ ಅಧಿಕಾರ ಕಳೆದುಕೊಂಡಿದೆ. ಡಿಎಂಕೆ ಹತ್ತು ವರ್ಷಗಳ ನಂತರ ಸರ್ಕಾರ ರಚಿಸಿದೆ. ಪುದುಚೇರಿಯಲ್ಲಿ ಮಾಜಿ ಮುಖ್ಯಮಂತ್ರಿ ಎನ್.ರಂಗಸ್ವಾಮಿ ನೇತೃತ್ವದ ಮೈತ್ರಿಕೂಟವು ಮೇಲುಗೈ ಸಾಧಿಸಿದೆ. ತೀವ್ರ ಸೆಣಸಾಟ ಮತ್ತು ರಾಜಕೀಯ ಜಿದ್ದಿಗೆ ಸಾಕ್ಷಿಯಾಗಿದ್ದ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಹ್ಯಾಟ್ರಿಕ್ ಜಯ ಸಾಧಿಸಿದೆ.
ಕೋಮು ಧ್ರುವೀಕರಣದ ಮೂಲಕವೇ ವಿಧಾನಸಭೆಯನ್ನು ಗೆದ್ದುಕೊಳ್ಳಲು ಯತ್ನಿಸಿದ ಇತರ ಪಕ್ಷಗಳ ತಂತ್ರಗಾರಿಕೆ ಸೋತಿದೆ. ಕಾಂಗ್ರೆಸ್ ಮತ್ತು ದಶಕಗಳ ಕಾಲ ಅಲ್ಲಿ ಆಡಳಿತ ನಡೆಸಿದ್ದ ಎಡರಂಗ ಮಣ್ಣುಮುಕ್ಕಿವೆ. ಪಶ್ಚಿಮ ಬಂಗಾಳದಲ್ಲಿ ಅಧಿಕಾರ ಹಿಡಿಯಲೇಬೇಕು ಎಂಬ ಒಂದೇ ಉದ್ದೇಶದಿಂದ ತನ್ನ ಬತ್ತಳಿಕೆಯಲ್ಲಿ ಇದ್ದ ಎಲ್ಲ ಅಸ್ತ್ರಗಳನ್ನೂ ಬಳಸಿಕೊಂಡ ಬಿಜೆಪಿಗೆ, ಆ ರಾಜ್ಯದ ಅಂತಃಸತ್ವವನ್ನು ಅರಿಯಲು ಆಗಿಲ್ಲ ಎಂಬುದು ಸತ್ಯ. 2019ರ ಲೋಕಸಭಾ ಚುನಾವಣೆಯಲ್ಲಿ ಸಿಕ್ಕ ಅನಿರೀಕ್ಷಿತ ಜಯದ ಉಮೇದಿನಲ್ಲಿ ವಿಧಾನಸಭೆಯೂ ಸುಲಭದ ತುತ್ತು ಎಂದು ಭಾವಿಸಿದ್ದ ಬಿಜೆಪಿ ವರಿಷ್ಠರು, ಸ್ಥಳೀಯ ನಾಯಕತ್ವದ ಮಹತ್ವ ಅರಿಯಲು ಬಂಗಾಳದ ಈ ಫಲಿತಾಂಶವನ್ನು ಅವಲೋಕಿಸಬಹುದು. ಖುದ್ದು ಪ್ರಧಾನಿ ಮತ್ತು ಕೇಂದ್ರ ಗೃಹ ಸಚಿವರು ಹತ್ತಾರು ರ್ಯಾಲಿಗಳನ್ನು ನಡೆಸಿ, ಮಮತಾ ಅವರನ್ನು ಲೇವಡಿ ಮಾಡಿದ್ದರು, ರಾಜಕೀಯ ಶಿಷ್ಟಾಚಾರಗಳ ಮಿತಿಯನ್ನು ಮೀರಿದ್ದರು. ಸ್ಥಳೀಯರು ಮತ್ತು ಹೊರಗಿನವರು ಎಂಬುದು ಅಲ್ಲಿ ಪ್ರಮುಖ ಚುನಾವಣಾ ವಿಷಯವಾಗಿತ್ತು. ಕಾಲಿಗೆ ಪೆಟ್ಟಾದರೂ ಧೃತಿಗೆಡದೆ ಹೋರಾಟ ನಡೆಸಿದ ಮಮತಾ ಅವರ ಕೆಚ್ಚು ಈಗಿನ ಫಲಿತಾಂಶದ ರೂಪದಲ್ಲಿ ವ್ಯಕ್ತವಾಗಿದೆ.
ಚುನಾವಣೆ ಹೊಸ್ತಿಲಲ್ಲಿ ಇದ್ದಾಗ ಟಿಎಂಸಿಯ ವರ್ಚಸ್ವಿ ನಾಯಕರನ್ನು ಸೆಳೆದುಕೊಂಡು ಅಧಿಕಾರ ಹಿಡಿಯುವ ಬಿಜೆಪಿಯ ಪ್ರಯತ್ನಕ್ಕೆ ನಿರೀಕ್ಷಿತ ಫಲ ದೊರೆತಿಲ್ಲ. ಆದರೆ, ಪ್ರಧಾನ ಪ್ರತಿಪಕ್ಷವಾಗಿ ಹೊರಹೊಮ್ಮಿರುವುದು ಕಡಿಮೆ ಸಾಧನೆಯಲ್ಲ. 2011ರವರೆಗೂ ಪಶ್ಚಿಮ ಬಂಗಾಳದ ರಾಜಕೀಯ ಭೂಪಟದಲ್ಲಿ ಮಹತ್ವದ ಸ್ಥಾನ ಹೊಂದಿದ್ದ ಎಡಪಕ್ಷಗಳು ಹಾಗೂ ಕಾಂಗ್ರೆಸ್ ಈಗ ನೆಲಕಚ್ಚಿವೆ, ಅವು ತಮ್ಮ ಅಸ್ತಿತ್ವದ ಮರುಶೋಧಕ್ಕೆ ಅಣಿಯಾಗಬೇಕಿದೆ. ತಮಿಳುನಾಡಿನಲ್ಲಿ ಡಿಎಂಕೆ ಜತೆಗಿನ ಸ್ನೇಹ ಕಾಂಗ್ರೆಸ್ಸಿಗೆ ಒಂದಿಷ್ಟು ಸಿಹಿ ನೀಡಿದೆ. ಪುದುಚೇರಿಯಲ್ಲಿನ ಮೈತ್ರಿಯು ಪ್ರಯೋಜನಕ್ಕೆ ಬಂದಿಲ್ಲ.
ಬಿಜೆಪಿಯ ಹಿಂದುತ್ವದ ರಾಜಕಾರಣಕ್ಕೆ ತಮಿಳುನಾಡು ಯಾವಾಗಲೂ ಸವಾಲಾಗಿದೆ. ಅದಕ್ಕೆ ಕಾರಣ ಅಲ್ಲಿನ ದ್ರಾವಿಡ ಚಳವಳಿಯ ಶಕ್ತಿ. ಎಂ.ಕರುಣಾನಿಧಿ ಮತ್ತು ಜೆ.ಜಯಲಲಿತಾ ನಂತರದ ಈ ಕಾಲಘಟ್ಟದಲ್ಲಿ ಅಲ್ಲಿ ಎಐಎಡಿಎಂಕೆ ಜೊತೆ ಕೈಜೋಡಿಸಿದ ಬಿಜೆಪಿ, ನೆಲೆ ವಿಸ್ತರಿಸಿಕೊಳ್ಳಲು ಪ್ರಯತ್ನಿಸಿತು. ಆದರೆ, ಈ ಪ್ರಯೋಗ ಫಲಿಸಿಲ್ಲ. ಎಐಎಡಿಎಂಕೆಯ ಸೋಲಿನ ಹಿಂದೆ ಸತತ ಎರಡು ಅವಧಿಗಳ ಆಡಳಿತ ವಿರೋಧಿ ಅಲೆ ಹಾಗೂ ಜಯಲಲಿತಾ ಅವರ ಅನುಪಸ್ಥಿತಿ ಕೆಲಸ ಮಾಡಿರಬಹುದು. ದಶಕಗಳ ಕಾಲ ತಂದೆಯ ನೆರಳಿನಂತೆ ಕೆಲಸ ಮಾಡಿದ ಎಂ.ಕೆ.ಸ್ಟಾಲಿನ್, ಡಿಎಂಕೆಗೆ ಗೆಲುವು ತಂದುಕೊಟ್ಟು, ತಮ್ಮ ರಾಜಕೀಯ ಭವಿಷ್ಯ ಭದ್ರಪಡಿಸಿಕೊಂಡಿದ್ದಾರೆ.
ಕೇರಳದಲ್ಲಿ ನಾಲ್ಕು ದಶಕಗಳ ಸಂಪ್ರದಾಯವನ್ನು ಮುರಿದಿರುವ ಮತದಾರರು, ಪಿಣರಾಯಿ ವಿಜಯನ್ ನೇತೃತ್ವದ ಎಲ್‍ಡಿಎಫ್‍ಗೆ ಸತತ ಎರಡನೆಯ ಬಾರಿ ಸರ್ಕಾರ ರಚಿಸುವ ಅವಕಾಶ ನೀಡಿದ್ದಾರೆ. ಪ್ರವಾಹ ಪರಿಸ್ಥಿತಿ ನಿಭಾಯಿಸಿದ ಪರಿ, ಜಗತ್ತೇ ಮೆಚ್ಚುವಂತೆ ಕೋವಿಡ್-19 ಸಾಂಕ್ರಾಮಿಕವನ್ನು ನಿರ್ವಹಿಸಿದ ರೀತಿಯನ್ನು ಜನ ಮೆಚ್ಚಿಕೊಂಡಿರಬಹುದು. ಶಬರಿಮಲೆ ಪ್ರಕರಣವನ್ನು ಮುಂದಿಟ್ಟುಕೊಂಡು ಹಿಂದುತ್ವದ ಅಲೆ ಸೃಷ್ಟಿಸಲು ಯತ್ನಿಸಿದ ಬಿಜೆಪಿಗೆ ಕೇರಳದಲ್ಲಿ ಯಶಸ್ಸು ಸಿಕ್ಕಿಲ್ಲ. ಇದ್ದ ಒಂದು ಸ್ಥಾನವನ್ನೂ ಕಳೆದುಕೊಂಡಿರುವುದು, ಈ ಬಗೆಯ ರಾಜಕಾರಣಕ್ಕೆ ಕೇರಳದಲ್ಲಿ ಅವಕಾಶವಿಲ್ಲ ಎಂಬ ಸ್ಪಷ್ಟ ಸಂದೇಶ ನೀಡಿದೆ. ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರ ತುರುಸಿನ ಪ್ರಚಾರದ ನಡುವೆಯೂ ಕಾಂಗ್ರೆಸ್ ಹಿನ್ನಡೆ ಅನುಭವಿಸಿದೆ.
ಅಸ್ಸಾಂ ರಾಜ್ಯದಲ್ಲಿ ಸಿಎಎ ಅಥವಾ ಎನ್‍ಆರ್‍ಸಿ ಚಳವಳಿಯು ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂಬುದನ್ನು ಫಲಿತಾಂಶ ತೋರಿಸಿದೆ. ಅಲ್ಲಿ ಬಿಜೆಪಿ ಅಧಿಕಾರ ಉಳಿಸಿಕೊಂಡಿದೆ. ಈ ಚಳವಳಿಯನ್ನು ನಂಬಿಕೊಂಡು ಕಾಂಗ್ರೆಸ್ ಮಾಡಿಕೊಂಡಿದ್ದ ಮೈತ್ರಿಯಿಂದ ಅದಕ್ಕೇನೂ ಅನುಕೂಲವಾಗಿಲ್ಲ.
ಪ್ರಸ್ತುತ ದೇಶಾದ್ಯಂತ ಗಟ್ಟಿಯಾದ ಪ್ರಾದೇಶಿಕ ಪಕ್ಷಗಳು ಹಾಗೂ ಬಿಜೆಪಿಯ ಹಿಂದುತ್ವವಾದಕ್ಕೆ ಪರ್ಯಾಯವಾಗಿ ಬಲಿಷ್ಠ ಸಂಕಥನಗಳನ್ನು ಕಟ್ಟುವ ನಾಯಕರು ಇರುವಲ್ಲಿ ಬಿಜೆಪಿಗೆ ಬಲಿಷ್ಠಗೊಳ್ಳಲು ಇನ್ನಷ್ಟು ಕಾಲ ಕಾಯಬೇಕೆಂಬುದನ್ನು ಈ ಚುನಾವಣೆ ಮತ್ತೊಮ್ಮೆ ಸಾಬೀತುಪಡಿಸಿದೆ.