ವಾಷಿಂಗ್ಟನ್ : ಚೀನಾದಲ್ಲಿ ಕೋವಿಡ್-19 ಸಾಂಕ್ರಾಮಿಕವಿದೆಯೆಂಬ ಮಾಹಿತಿ ಹೊರಜಗತ್ತಿಗೆ ಕಳೆದ ವರ್ಷ ತಿಳಿಯುವುದಕ್ಕಿಂತ ಕೆಲವು ತಿಂಗಳುಗಳ ಹಿಂದೆ-ನವೆಂಬರ್ 2019ರಲ್ಲಿ ಅಲ್ಲಿನ ವುಹಾನ್ ಇನ್‍ಸ್ಟಿಟ್ಯೂಟ್ ಆಫ್ ವೈರಾಲಜಿಯ ಮೂವರು ಸಂಶೋಧಕರಿಗೆ ಅಸೌಖ್ಯ ಕಾಡಿ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತಾಗಿತ್ತು ಎಂದು ವಾಲ್ ಸ್ಟ್ರೀಟ್ ಜರ್ನಲ್ ಈ ಹಿಂದೆ ಬಹಿರಂಗ ಪಡಿಸದೇ ಇರುವ ಅಮೆರಿಕಾದ ಗುಪ್ತಚರ ವರದಿಯನ್ನು ಉಲ್ಲೇಖಿಸಿ ಲೇಖನ ಪ್ರಕಟಿಸಿದೆ.
ಎಷ್ಟು ಮಂದಿ ಸಂಶೋಧಕರು ಬಾಧಿತರಾಗಿದ್ದರು, ಯಾವಾಗ ಬಾಧಿತರಾಗಿದ್ದರು, ಅವರ ಆಸ್ಪತ್ರೆ ಭೇಟಿಗಳ ಕುರಿತು ಮಾಹಿತಿ ನೀಡುವ ಗುಪ್ತಚರ ವರದಿಯು, ಕೋವಿಡ್-19 ವೈರಸ್ ಲ್ಯಾಬ್ ಒಂದರಿಂದ ಸೋರಿಕೆಯಾಗಿರಬಹುದೇ ಎಂಬ ಕುರಿತ ವಿಸ್ತೃತ ತನಿಖೆಯ ಆಗ್ರಹಕ್ಕೆ ಇನ್ನಷ್ಟು ಬಲ ನೀಡಬಹುದು ಎಂದ ವಾಲ್ ಸ್ಟ್ರೀಟ್ ಜರ್ನಲ್ ಹೇಳಿದೆ.ಕೋವಿಡ್-19 ಮೂಲ ಕುರಿತು ಇನ್ನೊಂದು ಹಂತದ ತನಿಖೆ ಕುರಿತು ವಿಶ್ವ ಆರೋಗ್ಯ ಸಂಸ್ಥೆಯ ಪ್ರಮುಖ ನಿರ್ಧಾರ ಕೈಗೊಳ್ಳುವ ಸಮಿತಿ ಸಭೆ ಸೇರುವ ಮುನ್ನ ಈ ವರದಿ ಹೊರಬಿದ್ದಿದೆ.
ವಾಲ್ ಸ್ಟ್ರೀಟ್ ಜರ್ನಲ್ ವರದಿ ಕುರಿತು ಯಾವುದೇ ಪ್ರತಿಕ್ರಿಯೆಯನ್ನು ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರೆ ನೀಡದೇ ಇದ್ದರೂ ಚೀನಾದೊಳಗೆ ಕೋವಿಡ್-19 ಮೂಲ ಹಾಗೂ ಕೋವಿಡ್-19 ಸಾಂಕ್ರಾಮಿಕದ ಆರಂಭಿಕ ದಿನಗಳ ಕುರಿತು ಬೈಡೆನ್ ಆಡಳಿತ ಗಂಭೀರ ಪ್ರಶ್ನೆಗಳನ್ನು ಹೊಂದಿದೆ ಎಂದಷ್ಟೇ ಹೇಳಿದ್ದಾರೆ.
ಹಸ್ತಕ್ಷೇಪ ಮತ್ತು ರಾಜಕೀಯದಿಂದ ಮುಕ್ತವಾಗಿ ಸಾಂಕ್ರಾಮಿಕದ ಮೂಲದ ಕುರಿತು ತಜ್ಞರ ತನಿಖೆ ನಡೆಸುವಂತಾಗಲು ಅಮೆರಿಕಾ ಸರಕಾರವು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಸದಸ್ಯ ದೇಶಗಳ ಜತೆ ಶ್ರಮಿಸುತ್ತಿದೆ ಎಂದೂ ಅವರು ತಿಳಿಸಿದ್ದಾರೆ.