ತಿರುವನಂತಪುರ: ತುರ್ತು ಸಂದರ್ಭಗಳಲ್ಲಿ ದೂರು ನೀಡಲು ಮಹಿಳೆಯರಿಗೆ ಮಾತ್ರ ನಗರಗಳಲ್ಲಿ ವಿಶೇಷ ಕಿಯೋಸ್ಕ್ ವ್ಯವಸ್ಥೆಯನ್ನು ಸ್ಥಾಪಿಸಲಾಗುವುದು ಎಂದು ರಾಜ್ಯ ಪೋಲೀಸ್ ಮುಖ್ಯಸ್ಥ ಲೋಕನಾಥ ಬೆಹ್ರಾ ಹೇಳಿದ್ದಾರೆ. ಯೋಜನೆಯ ಮೊದಲ ಹಂತವನ್ನು ಕೊಚ್ಚಿಯ ಹೈಕೋರ್ಟ್ ಕಟ್ಟಡದ ಬಳಿಯ ಮರೈನ್ ಡ್ರೈವ್ ನಲ್ಲಿ ಜಾರಿಗೊಳಿಸಲಾಗುತ್ತಿದೆ. ಕಿಯೋಸ್ಕ್ ಸ್ಥಾಪಿಸುವ ಜವಾಬ್ದಾರಿ ಕೊಚ್ಚಿ ಜಿಲ್ಲಾಧಿಕಾರಿಗೆ ಇದೆ.
ಆರಂಭದಲ್ಲಿ ಕೊಚ್ಚಿಯಲ್ಲಿ ಜಾರಿಗೆ ಬಂದ ಈ ವ್ಯವಸ್ಥೆಯನ್ನು ಕ್ರಮೇಣ ತಿರುವನಂತಪುರ, ಕೊಲ್ಲಂ, ತ್ರಿಶೂರ್, ಕೋಝಿಕೋಡ್ ಮತ್ತು ಕಣ್ಣೂರುಗಳಿಗೆ ವಿಸ್ತರಿಸಲಾಗುವುದು. ಈ ವ್ಯವಸ್ಥೆಯ ಮೂಲಕ ಮಹಿಳೆಯರು ಸುಲಭವಾಗಿ ದೂರು ನೀಡಬಹುದು.
ಕೊರೋನ ಹರಡುವಿಕೆಯ ದೃಷ್ಟಿಯಿಂದ, ಕೊಚ್ಚಿ ಕಡವಂತರ ಬಳಿ ಮೊನ್ನೆ ಕಿಯೋಸ್ಕ್ ವ್ಯವಸ್ಥೆಯನ್ನು ಸ್ಥಾಪಿಸಲಾಯಿತು. ಅಲ್ಲಿ ವ್ಯಕ್ತಿಗಳು ತುರ್ತು ಸಂದರ್ಭದಲ್ಲಿ ನೇರವಾಗಿ ಪೋಲೀಸ್ ಠಾಣೆಗೆ ಹೋಗದೆ ದೂರು ನೀಡಬಹುದು. ವಿಶೇಷ ನಿಯಂತ್ರಣ ಕೊಠಡಿಯಲ್ಲಿ ಪೋಲೀಸ್ ಅಧಿಕಾರಿಯೊಂದಿಗೆ ಮಾತನಾಡಲು ಮತ್ತು ದೂರು ನೀಡಲು ವೀಡಿಯೊ ಕರೆ ವ್ಯವಸ್ಥೆಯು ನಿಮಗೆ ಅವಕಾಶ ನೀಡುತ್ತದೆ. ಆನ್‍ಲೈನ್‍ನಲ್ಲಿ ದೂರು ಕೇಳಿದ ನಂತರ ಅಧಿಕಾರಿಗಳು ದೂರುದಾರರಿಗೆ ಅಗತ್ಯ ಸೂಚನೆಗಳನ್ನು ನೀಡಿ ದೂರು ಸ್ವೀಕರಿಸುತ್ತಾರೆ.
ಕಿಯೋಸ್ಕ್ ಮೂಲಕ ಪಡೆದ ದೂರುಗಳನ್ನು ಆಯಾ ಪೋಲೀಸ್ ಠಾಣೆಗಳ ಸಹಾಯದಿಂದ ಪರಿಹರಿಸಲಾಗುವುದು. ಇದಲ್ಲದೆ, ಸಮಯಕ್ಕೆ ಸರಿಯಾಗಿ ದೂರವಾಣಿ ಮೂಲಕ ತನಿಖೆಯ ಪ್ರಗತಿಯ ಬಗ್ಗೆ ದೂರುದಾರರಿಗೆ ತಿಳಿಸಲಾಗುವುದು.