ತಿರುವನಂತಪುರ: 15 ನೇ ಕೇರಳ ವಿಧಾನಸಭೆಯ ಉಪಸಭಾಪತಿ ಚುನಾವಣೆ ನಾಳೆ(ಜೂನ್ 1) ನಡೆಯಲಿದೆ. ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನವಾಗಿದೆ. ಸಿಪಿಐ ಸದಸ್ಯ ಚಿತ್ತಾಯಂ ಗೋಪಕುಮಾರ್ ಅವರು ಎಡರಂಗದಿಂದ ಸ್ಪರ್ಧಿಸಲಿದ್ದಾರೆ. ಅವರು ಅಡೂರ್ ಕ್ಷೇತ್ರದ ಶಾಸಕರಾಗಿದ್ದಾರೆ.
99 ಸದಸ್ಯರನ್ನು ಹೊಂದಿರುವ ಎಡರಂಗಕ್ಕೆ ಉಪ ಸ್ಪೀಕರ್ ಚುನಾವಣೆಯಲ್ಲೂ ಗೆಲುವಿನ ಭರವಸೆ ಇದೆ. ಪ್ರತಿಪಕ್ಷ ಯುಡಿಎಫ್ 41 ಸದಸ್ಯರನ್ನು ಹೊಂದಿದೆ. ಇದೇ ವೇಳೆ, ಸ್ಪೀಕರ್ ಚುನಾವಣೆಯಲ್ಲಿ ಸ್ಪರ್ಧಿಸಿದ ಯುಡಿಎಫ್, ಉಪ ಸಭಾಪತಿ ಚುನಾವಣೆಯಲ್ಲೂ ಸ್ಪರ್ಧಿಸುವ ಸಾಧ್ಯತೆಯಿದೆ.
ಕಾಂಗ್ರೆಸ್ ಸದಸ್ಯ ಪಿಸಿ ವಿಷ್ಣುನಾಥ್ ಅವರು ಸ್ಪೀಕರ್ ಚುನಾವಣೆಯಲ್ಲಿ ಸಿಪಿಎಂನ ಎಂಬಿ ರಾಜೇಶ್ ವಿರುದ್ಧ ಸ್ಪರ್ಧಿಸಿದ್ದರು. ರಾಜೇಶ್ 96 ಮತಗಳನ್ನು ಪಡೆದರೆ, ಪಿಸಿ ವಿಷ್ಣುನಾಥ್ 40 ಮತಗಳನ್ನು ಪಡೆದರು. 56 ಮತಗಳಿಂದ ರಾಜೇಶ್ ಆಯ್ಕೆಯಾದರು. ಸ್ಪೀಕರ್ ಚುನಾವಣೆಯ ಸಂದರ್ಭದಲ್ಲಿ ಮೂವರು ಸದಸ್ಯರು ಸದನಕ್ಕೆ ಗೈರುಹಾಜರಾಗಿದ್ದರು. ಸಚಿವ ವಿ ಅಬ್ದುರಹ್ಮಾನ್, ಕೋವಳಂ ಶಾಸಕ ಎಂ ವಿನ್ಸೆಂಟ್ ಮತ್ತು ನೆಮ್ಮರಾ ಶಾಸಕ ಕೆ ಬಾಬು ಹಾಜರಿರಲಿಲ್ಲ.ಹಂಗಾಮಿ ಸಭಾಪತಿ ಪಿಟಿಎ ರಹೀಮ್ ಮತ ಚಲಾಯಿಸಲು ನೋಂದಾಯಿಸಿರಲಿಲ್ಲ.
ಈ ಹಿನ್ನೆಲೆಯಲ್ಲಿ 15 ನೇ ಕೇರಳ ವಿಧಾನಸಭೆಯ ಉಪ ಸಭಾಪತಿಯಾಗಿ ಚಿತ್ತಾಯಂ ಗೋಪಕುಮಾರ್ ಅವರೇ ಬಹುತೇಕ ಆಯ್ಕೆಯಾಗಲಿದ್ದಾರೆ. ಚಿತ್ತಾಯಂ ಗೋಪಾಕುಮಾರ್ ಅವರು 2011 ರಿಂದ ಅಡೂರ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.