ನವದೆಹಲಿ: ದೇಶಾದ್ಯಂತ ದ್ರವೀಕೃತ ವೈದ್ಯಕೀಯ ಆಮ್ಲಜನಕ ಸರಬರಾಜು ಸುಗಮಗೊಳಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಟೋಲ್ ಪ್ಲಾಜಾಗಳಲ್ಲಿ ಆಮ್ಲಜನಕ ಹೊತ್ತ ಟ್ಯಾಂಕರ್ ಗಳಿಗೆ ಯಾವುದೇ ಶುಲ್ಕ ವಿಧಿಸದೆ ಸರಾಗವಾಗಿ ಸಾಗಲು ಅನುವು ಮಾಡಿಕೊಡಲಾಗಿದೆ.
ಮುಂದಿನ ಎರಡು ತಿಂಗಳ ವರೆಗೆ ಅಥವಾ ಮುಂದಿನ ಆದೇಶ ಬರುವವರೆಗೆ ದ್ರವೀಕೃತ ವೈದ್ಯಕೀಯ ಆಮ್ಲಜನಕ ಹೊತ್ತ ಕಂಟೈನರ್ ಗಳನ್ನು ಆಂಬ್ಯುಲೆನ್ಸ್ ಗಳಂತೆ ತುರ್ತು ಸೇವೆಗಳ ವಾಹನಗಳಾಗಿ ಪರಿಗಣಿಸಲಾಗುತ್ತದೆ ಎಂದು ಭೂಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ತಿಳಿಸಿದೆ.
ಫಾಸ್ಟ್ ಟ್ಯಾಗ್ ಜಾರಿ ನಂತರ ಟೋಲ್ ಪ್ಲಾಜಾಗಳಲ್ಲಿ ನಿಲುಗಡೆ ಹೆಚ್ಚು ತಡ ಇಲ್ಲವಾದರೂ, ಆಮ್ಲಜನಕ ಹೊತ್ತ ವಾಹನಗಳು ತ್ವರಿತವಾಗಿ ಸಂಚರಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅನುವು ಮಾಡಿಕೊಟ್ಟಿದೆ.
ಕೊರೋನಾ ಎರಡನೇ ಅಲೆ ಮಿತಿ ಮೀರಿ ಹರಡುತ್ತಿದ್ದು ಆಮ್ಲಜನಕ ಕೊರತೆಯಿಂದಾಗಿ ದೇಶದಲ್ಲಿ ಸೋಂಕಿತರ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ.