ಹೈದರಾಬಾದ್: ಕೊರೋನ ವೈರಸ್ ವಿರುದ್ಧ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ನಂತರ ಭಾರತದಲ್ಲಿ ಬಳಸಲಾಗುವ ರಶ್ಯದ ಮೊದಲ ಸ್ಪುಟ್ನಿಕ್ ವಿ ಲಸಿಕೆ ಶನಿವಾರ ಹೈದರಾಬಾದ್‍ಗೆ ಬಂದಿದೆ.
ಕೊರೋನವೈರಸ್‍ನ ಎರಡನೇ ಅಲೆ ದೇಶಾದ್ಯಂತ ಭಾರೀ ಹಾನಿಯನ್ನುಂಟು ಮಾಡಿರುವ ಸಮಯದಲ್ಲಿ ಹೊಸ ಲಸಿಕೆಯೊಂದಿಗೆ ಭಾರತಕ್ಕೆ ಆಗಮಿಸಿದೆ.
ಕಳೆದ 24 ಗಂಟೆಯಲ್ಲಿ ದೇಶದಲ್ಲಿ 4,01,993 ಹೊಸ ಕೊರೋನ ಸೋಂಕು ಪತ್ತೆಯಾಗಿದೆ. 3,523 ಸಾವುಗಳು ಸಂಭವಿಸಿವೆ.
ಹಲವು ರಾಜ್ಯಗಳಲ್ಲಿ ಲಸಿಕೆಗಳ ಕೊರತೆ ಇದ್ದರೂ ಮೂರನೇ ಹಂತದ ಲಸಿಕೆನೀಡಿಕೆ ಅಭಿಯಾನವು ಶನಿವಾರ ಆರಂಭಿಸಲಾಗಿದೆ.
ಸ್ಪುಟ್ನಿಕ್ ವಿ ಲಸಿಕೆಯ ಮೊದಲ ಬ್ಯಾಚ್ ರಶ್ಯದಿಂದ ಭಾರತದ ಹೈದರಾಬಾದ್ ಗೆ ಆಗಮಿಸುತ್ತದೆ. ಅದೇ ದಿನ ಭಾರತ ದೇಶವು ತನ್ನ ಎಲ್ಲ ವಯಸ್ಕರಿಗೆ ಸಾಮೂಹಿಕ ಕೋವಿಡ್ ಲಸಿಕೆಯನ್ನು ಆರಂಭಿಸುತ್ತಿದೆ. ಈ ಸಾಂಕ್ರಾಮಿಕ ರೋಗವನ್ನು ಒಗ್ಗಟ್ಟಿನಿಂದ ಸೋಲಿಸೋಣ ಎಂದು ವಿಶ್ವದ ಮೊದಲ ನೋಂದಾಯಿತ ಕೋವಿಡ್ 19 ಲಸಿಕೆ ಸ್ಪುಟ್ನಿಕ್ ವಿ ಕಂಪೆನಿ ಟ್ವೀಟ್ ಮಾಡಿದೆ.
ಸ್ಪುಟ್ನಿಕ್ ವಿ ಯ ತುರ್ತು ಬಳಕೆಗಾಗಿ ಡಾ.ರೆಡ್ಡೀಸ್ ಲ್ಯಾಬೋರೇಟರೀಸ್ ಭಾರತೀಯ ಔಷಧ ನಿಯಂತ್ರಕರಿಂದ ಅನುಮೋದನೆ ಪಡೆದ ಬಳಿಕ ಕಳೆದ ಸೆಪ್ಟಂಬರ್ ನಲ್ಲಿ ಲಸಿಕೆಯ ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಲು ರಶ್ಯದ ನೇರ ಹೂಡಿಕೆ ನಿಧಿಯೊಂದಿಗೆ ಸಹಭಾಗಿತ್ವಕ್ಕೆ ಸಹಿ ಹಾಕಿತ್ತು.