ನವದೆಹಲಿ: ಕೋವಿಡ್-19 ಪಾಸಿಟಿವ್ ಸೋಂಕಿತರನ್ನೊಳಗೊಂಡಂತೆ ದೇಶಾದ್ಯಂತ ಅಪರೂಪದ ಶಿಲೀಂದ್ರ ಸೋಂಕು ಮ್ಯೂಕಾರ್ಮೈಕೋಸಿಸ್ ಪ್ರಕರಣಗಳ ಹೆಚ್ಚಳದ ಬಗ್ಗೆ ಎಚ್ಚರ ವಹಿಸುವಂತೆ ಏಮ್ಸ್ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ವೈದ್ಯರಿಗೆ ಸೂಚಿಸಿದ್ದಾರೆ.
ಮ್ಯೂಕಾರ್ಮೈಕೋಸಿಸ್ ರೋಗಿಗಳಲ್ಲಿ ಶೇಕಡಾ 90ಕ್ಕೂ ಹೆಚ್ಚು ರೋಗಿಗಳು ಮಧುಮೇಹಿಗಳಾಗಿದ್ದು, ಕೋವಿಡ್ ರೋಗಿಗಳ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಮತ್ತು ಮೇಲ್ವಿಚಾರಣೆ ಮಾಡುವ ತುರ್ತು ಅಗತ್ಯವನ್ನು ಅವರು ಒತ್ತಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಪ್ರಸ್ತುತದ ಮಾಹಿತಿ ಪ್ರಕಾರ ಮಧುಮೇಹಿಗಳು ಮತ್ತು ಸ್ಟೆರಾಯ್ಡ್ ಬಳಸುವವರಿಗೆ ಈ ಪ್ರಕರಣಗಳು ಏರಿಕೆಯಾಗುತ್ತಿದೆ ಗುಜರಾತಿನ ಸರ್ಕಾರಿ ಆಸ್ಪತ್ರೆಗಳಲ್ಲಿ 500 ಕ್ಕೂ ಹೆಚ್ಚಿನ ಶಿಲೀಂದ್ರ ಸೋಂಕಿನ ಪ್ರಕರಣಗಳು ವರದಿಯಾಗಿರುವುದಾಗಿ ಆ ರಾಜ್ಯದ ವೈದ್ಯರು ಸಭೆಯಲ್ಲಿ ತಿಳಿಸಿರುವುದಾಗಿ ಅವರು ಹೇಳಿದರು.
ಗುಜರಾತಿನ ಆಸ್ಪತ್ರೆಗಳು ಮ್ಯೂಕೋರ್ಮೈಕೋಸಿಸ್ ರೋಗಿಗಳನ್ನು ನಿರ್ವಹಿಸಲು ಒಂದಕ್ಕಿಂತ ಹೆಚ್ಚು ವಾರ್ಡ್‌ಗಳನ್ನು ಸ್ಥಾಪಿಸಿವೆ. ಈಗ ಅವರು ಸಾಂಕ್ರಾಮಿಕ ರೋಗ ತಜ್ಞರು, ಇಎನ್‌ಟಿ ಶಸ್ತ್ರಚಿಕಿತ್ಸಕರು, ನರ ಶಸ್ತ್ರ ಚಿಕಿತ್ಸಕರು ಮತ್ತು ಪ್ಲಾಸ್ಟಿಕ್ ಶಸ್ತ್ರ ಚಿಕಿತ್ಸಕರೊಂದಿಗೆ ಸಂಯೋಜನೆಗೊಂಡಿದ್ದು, ಈ ವ್ಯಕ್ತಿಗಳ ಮೇಲೆ ನಿಗಾ ವಹಿಸಿವೆ. ಬಹುತೇಕ ಎಲ್ಲಾ ಮೈಕೋರ್ಮೈಕೋಸಿಸ್ ರೋಗಿಗಳು ಸ್ಟೆರಾಯ್ಡ್ ಗಳನ್ನು ತೆಗೆದುಕೊಂಡಿದ್ದರು ಎಂದು ಗುಲೇರಿಯಾ ತಿಳಿಸಿದರು.
ಶೇಕಡಾ 90ರಿಂದ 95 ರಷ್ಟು ಜನರು ಮಧುಮೇಹಿಗಳು. ಕೋವಿಡ್ ಸ್ವತಃ ಲಿಂಫೋಪೆನಿಯಾಗೆ ಕಾರಣವಾಗುತ್ತದೆ, ಆದ್ದರಿಂದ ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಸೋಂಕಿತರು ಫಂಗಲ್ ಸೋಂಕಿಗೆ ತುತ್ತಾಗುವ ಸಾಧ್ಯತೆಯಿರುತ್ತದೆ. ಸ್ಟೆರಾಯ್ಡ್ ತೆಗೆದುಕೊಳ್ಳುವುದರಿಂದ ರಕ್ತದಲ್ಲಿ ರಕ್ತ ಪ್ರಮಾಣ ಹೆಚ್ಚಾಗಲು ಕಾರಣವಾಗುತ್ತದೆ. ಏಮ್ಸ್ ನಲ್ಲಿ 18ರಿಂದ 20 ರೋಗಿಗಳು ಮ್ಯೂಕಾರ್ಮೈಕೋಸಿಸ್ ಗಳಾಗಿದ್ದಾರೆ. ಕೋವಿಡ್ ವಿರುದ್ಧ ಹೋರಾಡುವ ರೋಗಿಗಳಲ್ಲಿಯೂ ಸಹ ಶಿಲೀಂಧ್ರ ಸೋಂಕು ಇರುವುದನ್ನು ವೈದ್ಯರು ನೋಡುತ್ತಿದ್ದಾರೆ ಎಂದು ಅವರು ಹೇಳಿದರು.
ಮಧುಮೇಹದ ಪರಿಣಾಮಕಾರಿ ನಿಯಂತ್ರಣಕ್ಕಾಗಿ ಕೋವಿಡ್ ಕೇರ್ ಸೆಂಟರ್ ಗಳಿಗೆ ದಾಖಲಿಸುವಾಗ ರೋಗಿಗಳನ್ನು ತಪಾಸಣೆ ಮಾಡಬೇಕಾದ ಅಗತ್ಯವಿದೆ ಮಧುಮೇಹಿಗಳ ಸಕ್ಕರೆ ಪ್ರಮಾಣದ ಬಗ್ಗೆ ನಿರಂತರವಾಗಿ ನಿಗಾ ವಹಿಸಬೇಕು, ಇನ್ಸುಲಿನ್ ನೀಡುವ ಮೂಲಕ ಕಡಿಮೆ ಇರುವಂತೆ ನೋಡಿಕೊಳ್ಳಬೇಕು ಎಂದು ಏಮ್ಸ್ ನ ಎಂಡೊಕ್ರಿನೊಲಾಜಿ ಅಂಡ್ ಮೆಟಾಬಾಲಿಸಮ್ ಡಿಪಾರ್ಟ್ ಮೆಂಟ್ ನ ಸಹಾಯಕ ಪ್ರೊಫೆಸರ್ ಡಾ.ಯಶ್ ದೀಪ್ ಗುಪ್ತಾ ಸಲಹೆ ನೀಡಿದ್ದಾರೆ.