ಮಂಗಳೂರು: ದೇಶದಲ್ಲಿ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಭೀಕರತೆಯನ್ನು ಸೃಷ್ಟಿ ಮಾಡುತ್ತಿದೆ. ಕೊರೊನಾ ನಿಯಂತ್ರಣಕ್ಕೆ ಲಸಿಕೆ ಕಂಡು ಹಿಡಿದರೂ ಕೊರೊನಾ ಮಾತ್ರ ತನ್ನ ನರಬೇಟೆಯನ್ನು ಮುಂದುವರಿಸುತ್ತಿದೆ.
ಪ್ರಪಂಚದ ಅತಿರಥ ಮಹಾರಥ ವಿಜ್ಞಾನಿಗಳೇ ಅನೇಕ ಸಂಶೋಧನೆ ಮಾಡಿದರೂ, ಕೊರೊನಾ ಎಂಬ ಮಹಾಮಾರಿಯನ್ನು ಕಟ್ಟಿ ಹಾಕಲು ಸಾಧ್ಯವಾಗುತ್ತಿಲ್ಲ. ಕೊರೊನಾವನ್ನು ಹತೋಟಿಗೆ ತರಲಾಗದೆ ವೈದ್ಯ ವಿಜ್ಞಾನಿಗಳೇ ಕೈ ಕಟ್ಟಿ ಕೂತಿರುವ ಸಂದರ್ಭದಲ್ಲಿ ಕೊರೊನಾವನ್ನು ಶಮನ ಮಾಡಲು ಮಂತ್ರಶಕ್ತಿಯ ಪ್ರಯತ್ನವೂ ನಡೆಯುತ್ತಿದೆ.
ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕೊರೊನಾ ಮಹಾಮಾರಿ ನಿಯಂತ್ರಣಕ್ಕೆ ಮತ್ತು ಲೋಕ ಕಲ್ಯಾಣಾರ್ಥವಾಗಿ ವಿಶೇಷ ಪೂಜೆಯನ್ನು ಅರಂಭಿಸಲಾಗಿದೆ. ಮೇ 5ರಿಂದ ಮೇ 11ರವರೆಗೆ ನಿರಂತರ ಒಂದು ವಾರಗಳ ಪೂಜಾ ಹೋಮ ಹವನಗಳು ನಡೆಯಲಿದೆ. ರೋಗ ನಿಯಂತ್ರಣಕ್ಕಾಗಿ ಧನ್ವಂತರಿ ಹೋಮ ಮತ್ತು ಕ್ರಿಮಿಹರ ಸೂಕ್ತ ಜಪಸಹಿತ ಹೋಮ ಹವನಾದಿ ಕ್ರಿಯೆಗಳು ಕುಕ್ಕೆ ಸುಬ್ರಹ್ಮಣ್ಯ ದಲ್ಲಿ ನಡೆಯಲಿವೆ.
ಧನ್ವಂತರಿ ಪೂಜೆ ಯಾಕೆ
ಧನ್ವಂತರಿ ಹೋಮಕ್ಕೆ ವೇದಗಳಲ್ಲಿ ವಿಶೇಷ ಪ್ರಾಧಾನ್ಯತೆ ಹೊಂದಿದ್ದು, ಈ ಪೂಜೆಯಿಂದ ರೋಗ-ರುಜಿನಗಳೆಲ್ಲಾ ಮಾಯಾವಾಗುವುದು ಎಂಬ ನಂಬಿಕೆಯಿದೆ. ಧನ್ವ ಎಂದರೆ ರೋಗ-ರುಜಿನ ಅಥವಾ ಕಷ್ಟ ಕಾರ್ಪಣ್ಯ ಎಂಬ ಅರ್ಥವಿದ್ದು, ತರಿ ಎಂದರೆ ನಾಶ ಎಂಬಾರ್ಥವಾಗಿದೆ.
ವಿಕರ್ಮಗಳಿಂದ ಅನೇಕ ವ್ಯಾಧಿ ಆದಿಗಳ ಪೀಡೆಗೆ ಒಳಗಾದವನು ಧನ್ವಂತರಿಯ ಕೃಪೆಯನ್ನು ಪಡೆದದ್ದೇ ಆದರೆ ಆರೋಗ್ಯವನ್ನು ಹೊಂದಿ ಸಾಧನೆ ಮಾಡಬಲ್ಲ. ಮುಂದೆ ಭವರೋಗದಿಂದಲೇ ಮುಕ್ತನಾಗಬಲ್ಲ ಎಂಬ ನಂಬಿಕೆಯಿದೆ. ಈ ಹಿನ್ನಲೆಯಲ್ಲಿ ಕ್ಷೇತ್ರದ ಅರ್ಚಕರು ವಿಶೇಷ ಪೂಜೆಯನ್ನು ನಡೆಸಲಿದ್ದಾರೆ.