ನವದೆಹಲಿ: ಭಾರತ (ಬಿ.1.617) ಹಾಗೂ ಬ್ರಿಟನ್‌ನಲ್ಲಿ (ಬಿ.1.1.7) ಮೊದಲ ಬಾರಿಗೆ ಪತ್ತೆಯಾಗಿರುವ ಕೋವಿಡ್-19 ರೂಪಾಂತರಗೊಂಡ ವೈರಸ್‌ಗಳ ವಿರುದ್ಧ ಕೋವ್ಯಾಕ್ಸಿನ್ ಲಸಿಕೆಯು ಪರಿಣಾಮಕಾರಿಯಾಗಿದೆ ಎಂದು ಲಸಿಕೆ ತಯಾರಕ ಸಂಸ್ಥೆ ಭಾರತ್ ಬಯೋಟೆಕ್ ಭಾನುವಾರ ಮಾಹಿತಿ ನೀಡಿದೆ.
ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ ಹಾಗೂ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಸಹಯೋಗದಲ್ಲಿ ನಡೆಸಿದ ಅಧ್ಯಯನ ವರದಿಯಲ್ಲಿ ಇದು ದಾಖಲಾಗಿದೆ ಎಂದು ತಿಳಿಸಿದೆ.
ಭಾರತದಲ್ಲಿ ಮೊದಲ ಬಾರಿಗೆ ಪತ್ತೆಯಾಗಿರುವ ಬಿ.1.617 ಮಾದರಿ ತಟಸ್ಥಗೊಳಿಸುವಲ್ಲಿ ಲಸಿಕೆ ಪರಿಣಾಮಕಾರಿಯೆನಿಸಿದೆ. ಹಾಗೆಯೇ ಬ್ರಿಟನ್‌ನಲ್ಲಿ ಮೊದಲ ಬಾರಿಗೆ ಕಂಡುಬಂದ ಬಿ.1.1.7 ಹಾಗೂ ಲಸಿಕೆ ತಳಿ ಡಿ614ಜಿ ನಡುವಿನ ತಟಸ್ಥೀಕರಣದಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ ಎಂದು ಹೇಳಿದೆ.
ಪ್ರಸ್ತುತ ದೇಶದಲ್ಲಿ ಲಭ್ಯವಿರುವ ಮೂರು ಕೋವಿಡ್-19 ಲಸಿಕೆಗಳಲ್ಲಿ ಕೋವ್ಯಾಕ್ಸಿನ್ ಒಂದಾಗಿದೆ.ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ದೇಶದಲ್ಲಿ ಇದುವರೆಗೆ 18,22,20,164 ಲಸಿಕೆ ಡೋಸ್‌ಗಳನ್ನು ವಿತರಿಸಲಾಗಿದೆ.