ನವದೆಹಲಿ: ಕೊರೋನಾ ವೈರಸ್ ನ ಭಾರತ ರೂಪಾಂತರಿ ಎಂಬ ಉಲ್ಲೇಖದೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿರುವ ವಿಷಯಗಳನ್ನು ಕೂಡಲೇ ತೆಗೆಯುವಂತೆ ಕೇಂದ್ರ ಸರ್ಕಾರ ಸೋಷಿಯಲ್ ಮೀಡಿಯಾ ಕಂಪೆನಿಗಳನ್ನು ಕೇಳಿಕೊಂಡಿದೆ.ಕೋವಿಡ್-19 ಬಗ್ಗೆ ತಪ್ಪು ಮಾಹಿತಿ ಹಬ್ಬುತ್ತಿದ್ದು ಇದನ್ನು ತಡೆಯಬೇಕೆಂದು ಕೇಂದ್ರ ಸರ್ಕಾರ ಮುಂದಾಗಿದೆ.
ಇದಕ್ಕೆ ಸಂಬಂಧಪಟ್ಟಂತೆ ಮಾಹಿತಿ ತಂತ್ರಜ್ಞಾನ ಸಚಿವಾಲಯ ಎಲ್ಲಾ ಸೋಷಿಯಲ್ ಮೀಡಿಯಾ ಸಂಸ್ಥೆಗಳಿಗೆ ಪತ್ರ ಬರೆದಿದ್ದು, ವಿಶ್ವ ಆರೋಗ್ಯ ಸಂಸ್ಥೆ ತನ್ನ ಯಾವುದೇ ವರದಿಗಳಲ್ಲಿ ಬಿ.1.617 ರೂಪಾಂತರಿ ಕೊರೋನಾವನ್ನು ಭಾರತದ ರೂಪಾಂತರಿ ಎಂದು ಎಲ್ಲಿಯೂ ಉಲ್ಲೇಖಿಸಿಲ್ಲ, ಹಾಗಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಕೊರೋನಾ ರೂಪಾಂತರಿ ಬಗ್ಗೆ ತಪ್ಪು ಮಾಹಿತಿಗಳು ಪ್ರಸಾರವಾಗುತ್ತಿವೆ ಎಂದು ಹೇಳಿದೆ.
ಈ ಸಂಬಂಧ ಐಟಿ ಸಚಿವಾಲಯ ನಿನ್ನೆ ನೊಟೀಸ್ ನ್ನು ಜಾರಿ ಮಾಡಿದ್ದು ಅದರಲ್ಲಿ, ಆನ್ ಲೈನ್ ನಲ್ಲಿ ತಪ್ಪು ಮಾಹಿತಿ ಹಬ್ಬುತ್ತಿದ್ದು ಭಾರತದ ರೂಪಾಂತರಿ ಕೊರೋನಾ ಜಗತ್ತಿನಾದ್ಯಂತ ಹರಡುತ್ತಿದೆ ಎಂದು ಸುಳ್ಳು ಸುದ್ದಿಯನ್ನು ಹಬ್ಬಿಸಲಾಗುತ್ತಿದೆ.ಕೊರೋನಾ ರೂಪಾಂತರಿಗೆ ಸಂಬಂಧಪಟ್ಟಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಕಳೆದ ಮೇ 12ರಂದು ಪತ್ರಿಕಾ ಪ್ರಕಟಣೆ ಹೊರಡಿಸಿದೆ ಎಂದು ಹೇಳಿದೆ.
ಕೊರೋನಾ ವೈರಸ್ ಗೆ ಸಂಬಂಧಪಟ್ಟಂತೆ ಭಾರತದ ರೂಪಾಂತರಿ ಎಂಬ ಉಲ್ಲೇಖವನ್ನಿಟ್ಟುಕೊಂಡು ಬರುತ್ತಿರುವ ಎಲ್ಲಾ ಹೆಸರುಗಳು, ವಿಷಯಗಳು, ಉಲ್ಲೇಖಗಳನ್ನು ತಕ್ಷಣವೇ ತೆಗೆಯುವಂತೆ ಸೋಷಿಯಲ್ ಮೀಡಿಯಾ ಕಂಪೆನಿಗಳಿಗೆ ಕೇಂದ್ರ ಸರ್ಕಾರ ಕೇಳಿದೆ.
ಈ ಹಿಂದೆ, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ, ಕೊರೋನಾ ವೈರಸ್ ಗೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾಗಳಲ್ಲಿ ಬರುತ್ತಿರುವ ತಪ್ಪು, ಸುಳ್ಳು ಮಾಹಿತಿಗಳನ್ನು ಆದಷ್ಟು ತಡೆಯುವಂತೆ ಸಲಹೆಯನ್ನು ಹೊರಡಿಸಿದ್ದವು.