ಲಖನೌ: ಉತ್ತರ ಪ್ರದೇಶದ ಹಳ್ಳಿಯೊಂದರಲ್ಲಿ ಕೋವಿಡ್ ಲಸಿಕೆ ನೀಡುವ ಆರೋಗ್ಯ ಅಧಿಕಾರಿಗಳನ್ನು ಕಂಡ ತಕ್ಷಣ ಗ್ರಾಮಸ್ಥರು ಹತ್ತಿರದ ನದಿಯ ಕಡೆಗೆ ಓಡಿ ಹೋಗಿದ್ದಾರೆ. ಅವರನ್ನು ಹಿಂಬಾಲಿಸಿದ ಅಧಿಕಾರಿಗಳು ನದಿಯ ದಡವನ್ನು ಸಮೀಪಿಸುತ್ತಿದ್ದಂತೆ ಗ್ರಾಮಸ್ಥರು ನದಿಗೆ ಹಾರಿರುವ ವಿಲಕ್ಷಣ ಘಟನೆ ನಡೆದಿದೆ.
ಉತ್ತರ ಪ್ರದೇಶದ ಬಾರಬಂಕಿ ಜಿಲ್ಲೆಯ ಸಿಸೌಡಾ ಗ್ರಾಮವು ಇಂತಹ ಘಟನೆಗೆ ಸಾಕ್ಷಿಯಾಗಿದೆ.
ಗ್ರಾಮಸ್ಥರಿಗೆ ಕೋವಿಡ್ ಲಸಿಕೆ ನೀಡಲು ಆರೋಗ್ಯ ಅಧಿಕಾರಿಗಳ ತಂಡವೊಂದು ಭಾನುವಾರ ಗ್ರಾಮದೊಳಗೆ ಪ್ರವೇಶಿಸಿದೆ. ಅಧಿಕಾರಿಗಳು ಹಳ್ಳಿಯನ್ನು ಪ್ರವೇಶಿಸುತ್ತಿದ್ದಂತೆ ಗ್ರಾಮಸ್ಥರು ಹತ್ತಿರದ ನದಿಯ ಕಡೆಗೆ ಓಡಿಹೋಗಿದ್ದಾರೆ. ಅವರನ್ನು ಹಿಂಬಾಲಿಸಿದ ಅಧಿಕಾರಿಗಳು ನದಿಯ ದಡಕ್ಕೆ ಸಮೀಪಿಸುತ್ತಿದ್ದಂತೆ ಗ್ರಾಮಸ್ಥರು ನದಿಗೆ ಹಾರಿದ್ದಾರೆ. ಲಸಿಕೆ ತೆಗೆದುಕೊಳ್ಳಲು ನಿರಾಕರಿಸಿರುವ ಸುಮಾರು 200 ಜನರು ತಮ್ಮ ಮನೆಗಳಿಂದ ಪರಾರಿಯಾಗಿದ್ದರೆಂದು ವರದಿಯಾಗಿದೆ.
ನದಿಗೆ ಹಾರಿದ ಗ್ರಾಮಸ್ಥರನ್ನು ಲಸಿಕೆ ತೆಗೆದುಕೊಳ್ಳಲು ಅಧಿಕಾರಿಗಳು ಒತ್ತಾಯಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಆ ನಂತರ ಭಯಭೀತರಾದ ಅಧಿಕಾರಿಗಳು ಲಸಿಕೆ ನೀಡುವುದಿಲ್ಲ ಎಂಬ ಭರವಸೆಯನ್ನು ಕೊಟ್ಟ ನಂತರವೇ ಗ್ರಾಮಸ್ಥರು ನದಿಯ ದಂಡೆಗೆ ಮರಳಿದ್ದಾರೆ.
1,500 ನಿವಾಸಿಗಳನ್ನು ಹೊಂದಿರುವ ಗ್ರಾಮದಲ್ಲಿ ಕೇವಲ 14 ಜನರು ಲಸಿಕೆ ಪಡೆಯಲು ಮುಂದೆ ಬಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
'ಗ್ರಾಮಸ್ಥರಲ್ಲಿ ಅರಿವಿನ ಕೊರತೆ ಇದೆ. ನಾವು ಶೀಘ್ರದಲ್ಲೇ ಸಿಸೌಡಾ ಗ್ರಾಮದಲ್ಲಿ ಜಾಗೃತಿ ಅಭಿಯಾನವನ್ನು ಕೈಗೊಳ್ಳಲಿದ್ದೇವೆ' ಎಂದು ಬಾರಾಬಂಕಿಯ ಹಿರಿಯ ಜಿಲ್ಲಾಧಿಕಾರಿಯೊಬ್ಬರು ಹೇಳಿದ್ದಾರೆ.
ಉತ್ತರ ಪ್ರದೇಶದ ಕೆಲವು ಜಿಲ್ಲೆಗಳಲ್ಲಿ ಕೋವಿಡ್ ಪರೀಕ್ಷೆ ಮತ್ತು ಲಸಿಕೆ ನೀಡುವ ಸಂದರ್ಭದಲ್ಲಿ ಆರೋಗ್ಯ ಕಾರ್ಯಕರ್ತರು ಈ ಹಿಂದೆಯೂ ಹಲವು ಸಮಸ್ಯೆಗಳನ್ನು ಎದುರಿಸಿದ್ದರು.