ಉಡುಪಿ: ಅಯೋಧ್ಯೆಯ ಶ್ರೀರಾಮ ಮಂದಿರಕ್ಕಾಗಿ ನಿರ್ಮಾಣ ಆಗಲಿರುವ ಬೃಹತ್ ಬ್ರಹ್ಮರಥಕ್ಕೆ ಇಂದು ಕುಂದಾಪುರದ ಕುಂಭಾಶಿಯಲ್ಲಿ ಚಾಲನೆ ನೀಡಲಾಗಿದೆ. ಪೂರ್ವನಿಗದಿತವಾಗಿರುವಂತೆ ಅಕ್ಷಯ ತದಿಗೆಯ ಈ ಶುಭದಿನದಂದು ರಥ ನಿರ್ಮಾಣ ಕಾರ್ಯ ಆರಂಭಿಸಲಾಗಿದೆ. ಹಿರಿಯ ರಥಶಿಲ್ಪಿಗಳಾದ ಲಕ್ಷ್ಮೀನಾರಾಯಣ ಆಚಾರ್ಯ ಮತ್ತು ರಾಜಗೋಪಾಲಾಚಾರ್ಯ ಅವರಿಂದ ರಥ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ.
ಶ್ರೀರಾಮನಿಗಾಗಿ ಜಗತ್ತಿನಲ್ಲೇ ಅತಿ ಎತ್ತರದ ಭವ್ಯ ಬ್ರಹ್ಮರಥ ಇದಾಗಿರಲಿದ್ದು, ಎರಡೂವರೆ ವರ್ಷದ ಅವಧಿಯಲ್ಲಿ ಇದನ್ನು ಪೂರ್ಣಗೊಳಿಸುವ ಗುರಿ ಇರಿಸಿಕೊಳ್ಳಲಾಗಿದೆ. ಕಿಷ್ಕಿಂಧೆಯ ಹನುಮ ಜನ್ಮಭೂಮಿ ತೀರ್ಥಕ್ಷೇತ್ರದ ವತಿಯಿಂದ ಈ ರಥವು ಅಯೋಧ್ಯೆಯ ಶ್ರೀರಾಮಮಂದಿರಕ್ಕೆ ಸಮರ್ಪಣೆ ಆಗಲಿದೆ.
ರಾಷ್ಟ್ರಪ್ರಶಸ್ತಿ ಪುರಸ್ಕೃತ ರಥಶಿಲ್ಪಿ, ಕೋಟೇಶ್ವರ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಕೇಂದ್ರದ ಲಕ್ಷ್ಮೀನಾರಾಯಣ ಆಚಾರ್ಯ ಇದರ ನಿರ್ಮಾತೃರಾಗಿ ಇರಲಿದ್ದಾರೆ. ರಥ ನಿರ್ಮಾಣಕ್ಕೆಂದೇ ಕುಂಭಾಶಿಯಲ್ಲಿ ಕಟ್ಟಲಾಗಿರುವ ವಿಶಾಲವಾದ ಶೆಡ್ನಲ್ಲಿ ಈ ನಿರ್ಮಾಣ ಕಾರ್ಯ ನಡೆಯಲಿದೆ. ಒಟ್ಟು 60 ಟನ್ ಮರದಿಂದ ತಯಾರಾಗಲಿರುವ ಈ ರಥದ ಭಾರವೇ 50 ಟನ್ ಇರಲಿದೆ. ರಥದ ಸುತ್ತ ರಾಮ ಹಾಗೂ ರಾಮಾಯಣಕ್ಕೆ ಸಂಬಂಧಿಸಿದ ಅಪೂರ್ವ ಕೆತ್ತನೆಗಳಿರುತ್ತವೆ. ಸುಮಾರು 4 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುವ ರಥದ ಕಾರ್ಯದಲ್ಲಿ ಶಿಲ್ಪಿಗಳ ಸಹಿತ ಸುಮಾರು 50 ಮಂದಿ ಶ್ರಮ ವಹಿಸಲಿದ್ದಾರೆ.