ನವದೆಹಲಿ: ಹೊಸ ಗೌಪ್ಯತಾ ನೀತಿಯನ್ನು ಹಿಂಪಡೆದುಕೊಳ್ಳುವಂತೆ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಬುಧವಾರ ವಾಟ್ಸಾಪ್‌ಗೆ ನಿರ್ದೇಶನ ನೀಡಿದೆ ಎಂದು ಮೂಲಗಳು ತಿಳಿಸಿವೆ.
ವಾಟ್ಸಾಪ್ ಗೌಪ್ಯತೆ ನೀತಿಯಲ್ಲಿನ ಬದಲಾವಣೆಗಳು, ಮಾಹಿತಿ ಗೌಪ್ಯತೆ, ದತ್ತಾಂಶ ಸುರಕ್ಷತೆ ಮತ್ತು ಬಳಕೆದಾರರ ಆಯ್ಕೆಯ ಪವಿತ್ರ ಮೌಲ್ಯಗಳನ್ನು ಹಾಳು ಮಾಡುತ್ತದೆ. ಇದು ಭಾರತೀಯ ನಾಗರಿಕರ ಹಕ್ಕುಗಳು ಮತ್ತು ಹಿತಾಸಕ್ತಿಗಳಿಗೆ ಹಾನಿ ಮಾಡುತ್ತದೆ ಎಂದು ಐಟಿ ಸಚಿವಾಲಯ ವಾಟ್ಸಾಪ್ ಗೆ ನೋಟಿಸ್ ನೀಡಿರುವುದಾಗಿ ಸರ್ಕಾರದ ಮೂಲಗಳು ತಿಳಿಸಿವೆ.
ನೋಟಿಸ್‌ಗೆ ಪ್ರತಿಕ್ರಿಯಿಸಲು ಸರ್ಕಾರ ವಾಟ್ಸ್‌ಆಯಪ್‌ಗೆ ಏಳು ದಿನಗಳ ಕಾಲಾವಕಾಶ ನೀಡಿದ್ದು, ಯಾವುದೇ ತೃಪ್ತಿದಾಯಕ ಪ್ರತಿಕ್ರಿಯೆ ಬರದಿದ್ದರೆ, ಕಾನೂನಿಗೆ ಅನುಗುಣವಾಗಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ.
ಮೇ 18 ರಂದು ವಾಟ್ಸಾಪ್‌ಗೆ ನೀಡಿದ ನೋಟಿಸ್ ನಲ್ಲಿ ಸಚಿವಾಲಯವು ತನ್ನ ಗೌಪ್ಯತೆ ನೀತಿ 2021 ಅನ್ನು ಹಿಂತೆಗೆದುಕೊಳ್ಳುವಂತೆ ಮೆಸೇಜಿಂಗ್ ಪ್ಲಾಟ್‌ಫಾರ್ಮ್‌ಗೆ ಮತ್ತೊಮ್ಮೆ ತಿಳಿಸಿದೆ ಎಂದು ಅವರು ಹೇಳಿದ್ದಾರೆ.