'ಆನ್‌ಲೈನ್ ವೇದಿಕೆಗಳ ಮೂಲಕ ಮಾಹಿತಿ ಹಂಚಿಕೊಳ್ಳುವುದರ ಮೇಲೆ ನಿರ್ಬಂಧ ವಿಧಿಸುವ ಕ್ರಿಯೆಗಳನ್ನು ತಡೆಯಬೇಕಿದೆ. ಹೀಗೆ ತಡೆಯಬೇಕಿರುವುದು ಮಾಹಿತಿ ಹಂಚಿಕೊಳ್ಳುವ ವ್ಯಕ್ತಿಗಳ ಹಿತಾಸಕ್ತಿಗೆ ಪೂರಕವಷ್ಟೇ ಅಲ್ಲದೆ, ದೇಶದ ಪ್ರಜಾತಾಂತ್ರಿಕ ರಚನೆಯ ಹಿತದ ದೃಷ್ಟಿಯಿಂದಲೂ ಮುಖ್ಯ. ಇಂತಹ ಮಾಹಿತಿ ತಕ್ಷಣಕ್ಕೆ ಸಿಗದಿದ್ದರೆ, ಕೋವಿಡ್-19 ಸಾಂಕ್ರಾಮಿಕವು ಈಗಿನ ಸ್ಥಿತಿಗಿಂತ ಹೆಚ್ಚು ದುರಂತಮಯವಾಗಿ ಪರಿವರ್ತನೆ ಕಾಣಬಹುದು...' ಎಂದು ನ್ಯಾಯಮೂರ್ತಿಗಳಾದ ಧನಂಜಯ ವೈ. ಚಂದ್ರಚೂಡ್, ಎಲ್.ನಾಗೇಶ್ವರ ರಾವ್ ಮತ್ತು ಎಸ್.ರವೀಂದ್ರ ಭಟ್ ಅವರಿದ್ದ ಸುಪ್ರೀಂ ಕೋರ್ಟ್‌ನ ನ್ಯಾಯಪೀಠವು ಕಳೆದ ವಾರ ನೀಡಿದ ತೀರ್ಪಿನಲ್ಲಿ ಹೇಳಿದೆ.
ಜನರ ಹಕ್ಕುಗಳ ಪರವಾಗಿ, ಪ್ರಭುತ್ವದ ದಮನಕಾರಿ ಧೋರಣೆಯ ವಿರುದ್ಧವಾಗಿ ನೀಡಿದ ತೀರ್ಪಿನ ರೀತಿಯಲ್ಲಿಯೂ ಇದನ್ನು ಓದಿಕೊಳ್ಳಬಹುದು. ಸಾಂಕ್ರಾಮಿಕದ ಸಂದರ್ಭದಲ್ಲಿ ಸಾರ್ವಜನಿಕರು ತಮ್ಮ ಪ್ರೀತಿಪಾತ್ರರಿಗೆ ಆಮ್ಲಜನಕ ಬೇಕಿದೆ ಅಥವಾ ಇನ್ಯಾವುದೋ ತುರ್ತು ವೈದ್ಯಕೀಯ ನೆರವಿನ ಅಗತ್ಯವಿದೆ ಎಂದು ಸಾಮಾಜಿಕ ಜಾಲತಾಣಗಳ ಮೂಲಕ ಕೇಳಿಕೊಳ್ಳುವುದು ಕೆಲವು ಸರ್ಕಾರಗಳಿಗೆ ರುಚಿಸುತ್ತಿಲ್ಲ.
ಹಾಗೆ ಸಹಾಯ ಯಾಚಿಸುವುದು ಸರ್ಕಾರಕ್ಕೆ ಕೆಟ್ಟ ಹೆಸರು ತರುತ್ತದೆ, ಇತರರ ಎದುರು ದೇಶದ ಪ್ರತಿಷ್ಠೆಗೆ ಕುಂದು ತರುತ್ತದೆ ಎಂದೆಲ್ಲ ಸರ್ಕಾರಗಳು ಯೋಚಿಸುವುದಿದೆ. ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ನೇತೃತ್ವದ ಸರ್ಕಾರವು ಜನರ ಮೂಲಭೂತ ಹಕ್ಕನ್ನು ದಮನ ಮಾಡುವ ದಿಸೆಯಲ್ಲಿ ಒಂದು ಹೆಜ್ಜೆ ಮುಂದೆ ಇರಿಸಿ, ಈ ರೀತಿ ಸಾಮಾಜಿಕ ಮಾಧ್ಯಮಗಳ ಮೂಲಕ 'ತಪ್ಪು ಮಾಹಿತಿ ರವಾನಿಸುವವರ' ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗುವುದು, ಅವರ ಆಸ್ತಿಯನ್ನು ವಶಕ್ಕೆ ತೆಗೆದುಕೊಳ್ಳಲಾಗುವುದು ಎಂದು ಹೇಳಿತ್ತು. ತನ್ನ ತಾತನಿಗೆ ಆಮ್ಲಜನಕದ ಅಗತ್ಯವಿದೆ ಎಂದು ಹೇಳಿದ ವ್ಯಕ್ತಿಯೊಬ್ಬರ ವಿರುದ್ಧ ಅಲ್ಲಿನ ಪೊಲೀಸರು 'ತಪ್ಪು ಮಾಹಿತಿ' ಹರಡಿದ ಆರೋಪದ ಅಡಿ ಪ್ರಕರಣ ಕೂಡ ದಾಖಲಿಸಿಕೊಂಡ ವರದಿಗಳಿವೆ.
ಈಗ ಸುಪ್ರೀಂ ಕೋರ್ಟ್ ಹೇಳಿರುವ ಮಾತುಗಳು ಸರ್ಕಾರದ ಕಡೆಯಿಂದಲೇ ನಡೆಯುವ ಇಂತಹ ದಮನಕಾರಿ ಕೃತ್ಯಗಳಿಗೆ ಕಡಿವಾಣ ಹಾಕಲು ನೆರವಾಗುತ್ತವೆ. ಸಾಮಾಜಿಕ ಜಾಲತಾಣಗಳ ಮೂಲಕ ಸಹಾಯ ಯಾಚಿಸುವವರ ವಿರುದ್ಧ ಕ್ರಮ ಜರುಗಿಸಿದರೆ ನ್ಯಾಯಾಂಗ ನಿಂದನೆ ಕಾನೂನಿನ ಅಡಿ ಮೊಕದ್ದಮೆ ದಾಖಲಿಸಿಕೊಳ್ಳಬೇಕಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಕಠಿಣ ಎಚ್ಚರಿಕೆ ರವಾನಿಸಿದೆ. 'ತಮ್ಮ ಪ್ರೀತಿಪಾತ್ರರಿಗೆ ಸಹಾಯ ಬೇಕಾಗಿದೆ ಎಂದು ಸಾಮಾಜಿಕ ಜಾಲತಾಣಗಳ ಮೂಲಕ ನೆರವು ಕೇಳುವವರ ಕಷ್ಟವನ್ನು ಪ್ರಭುತ್ವವು ಇನ್ನಷ್ಟು ಹೆಚ್ಚಿಸಬಾರದು' ಎಂದು ಸುಪ್ರೀಂ ಕೋರ್ಟ್ ತಾಕೀತು ಮಾಡಿದೆ.
ಜನ ಕಷ್ಟ ಹೇಳಿಕೊಳ್ಳುವುದು 'ದೇಶದ ಪ್ರತಿಷ್ಠೆಗೆ ಕುಂದು ತರುವಂಥದ್ದು', 'ಜನರಲ್ಲಿ ಭೀತಿ ಮೂಡಿಸುವ ಉದ್ದೇಶದ್ದು', 'ಆಡಳಿತ ವ್ಯವಸ್ಥೆಗೆ ಕೆಟ್ಟ ಹೆಸರು ತರುವಂಥದ್ದು' ಎಂದು ಮಾಹಿತಿ ಪ್ರವಾಹದ ಇಂದಿನ ಕಾಲಘಟ್ಟದಲ್ಲಿ ಸರ್ಕಾರಗಳೇ ಹೇಳುವುದು ಖಂಡನೀಯ. ಸಹಾಯ ಯಾಚಿಸುವವರತ್ತ ತಾಯಿಯ ಮಮತೆ ಹರಿಸಬೇಕಿದ್ದ ಸರ್ಕಾರಗಳು, ಅಂಥವರ ವಿರುದ್ಧ ಪೊಲೀಸರ ಮೂಲಕ ಕ್ರಮ ಜರುಗಿಸುತ್ತವೆ ಎಂಬುದು ದೇಶದ ಪ್ರಜಾತಂತ್ರ ವ್ಯವಸ್ಥೆಗೆ ಒಂದು ಕಪ್ಪು ಚುಕ್ಕೆ ಇದ್ದಂತೆ. ಸುಪ್ರೀಂ ಕೋರ್ಟ್‌ನ ಈ ತೀರ್ಪು ಇಂತಹ ಎಲ್ಲೆ ಮೀರಿದ ವರ್ತನೆಗಳಿಗೆ ಕಡಿವಾಣ ಹಾಕುತ್ತದೆ ಎಂಬ ಭರವಸೆ ಹೊಂದಬಹುದು.
1973ರಲ್ಲಿ ಮಹಾರಾಷ್ಟ್ರ ಕಂಡ ಬರಗಾಲವು 1943ರಲ್ಲಿ ಬಂಗಾಳ ಕಂಡ ಕ್ಷಾಮದಷ್ಟು ಭೀಕರ ಪರಿಣಾಮವನ್ನು ಬೀರಲಿಲ್ಲ. ಇದಕ್ಕೆ ಒಂದು ಕಾರಣ, ಮಾಹಿತಿ ವಿಪುಲವಾಗಿ ಸಿಗುತ್ತಿದ್ದುದು ಹಾಗೂ ಮಾಹಿತಿ ಸಿಕ್ಕಿದುದರ ಪರಿಣಾಮವಾಗಿ, ಸಮಸ್ಯೆ ಇದೆ ಎಂಬುದನ್ನು ಗುರುತಿಸಿದ್ದು. ಈ ಅಂಶವನ್ನು ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ. ಈ ಸಾಂಕ್ರಾಮಿಕದ ನೆನಪುಗಳು ಸಮೂಹದ ಪ್ರಜ್ಞೆಯಲ್ಲಿ ಇರಬೇಕು ಎಂದಾದರೆ, ಸಾರ್ವಜನಿಕರು ಸಾಮಾಜಿಕ ಜಾಲತಾಣಗಳ ಮೂಲಕ ಈ ರೀತಿ ಮಾಹಿತಿ ಹಂಚಿಕೊಳ್ಳುವುದು ಅಗತ್ಯವಾಗುತ್ತದೆ ಎಂದೂ ಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.
ನಮ್ಮನ್ನು ಇಂದು ಕಾಡುತ್ತಿರುವ ಸಮಸ್ಯೆಗಳ ಅರಿವನ್ನು ಮುಂದಿನ ಕಾಲಕ್ಕೂ ವರ್ಗಾಯಿಸಲು ಈ ನೆನಪುಗಳು ನೆರವಾಗುತ್ತವೆ. ಸಾಮೂಹಿಕ ಪ್ರಜ್ಞೆಯಲ್ಲಿ ಈ ನೆನಪುಗಳು ಇರುವಂತೆ ಮಾಡುವಲ್ಲಿ ನ್ಯಾಯಾಲಯಗಳು ಹೊಂದಿರುವ ಪಾತ್ರವನ್ನು ಉಪೇಕ್ಷಿಸುವಂತೆ ಇಲ್ಲ ಎಂದೂ ಕೋರ್ಟ್ ಹೇಳಿದೆ. ಈ ದುರಿತ ಕಾಲದ ನೆನಪುಗಳು ಮುಂದಿನ ತಲೆಮಾರುಗಳಿಗೆ ವರ್ಗಾವಣೆ ಆದಾಗ, ಆ ತಲೆಮಾರುಗಳು ಇಂದಿನ ತಪ್ಪುಗಳು ಮರುಕಳಿಸದಂತೆ ನೋಡಿಕೊಳ್ಳಬಹುದು.
ಹಾಗಾಗಬೇಕು ಎಂದಾದರೆ, ಇಂದಿನ ಎಲ್ಲ ಅನುಭವಗಳು ಸಾಮಾಜಿಕ ಜಾಲತಾಣಗಳ ಮೂಲಕ ಅಥವಾ ಇತರ ಯಾವುದೇ ಮಾಧ್ಯಮದ ಮೂಲಕ ದಾಖಲಾಗಬೇಕು. ಜನ ಕಡುಕಷ್ಟ ಎದುರಿಸುತ್ತಿರುವ ಈ ಸಂದರ್ಭದಲ್ಲಿ ಬಂದಿರುವ ಸುಪ್ರೀಂ ಕೋರ್ಟ್‌ನ ಈ ತೀರ್ಪು, ಅದರಲ್ಲಿನ ಇಂತಹ ಮಾನವೀಯ ಮಾತುಗಳು ನಾಡಿನ ಸಮಷ್ಟಿ ಪ್ರಜ್ಞೆಯ ಮೇಲೆ ಬಹುಕಾಲ ಪ್ರಭಾವ ಬೀರುವುದು ಖಂಡಿತ.