ಗುವಾಹತಿ: ಅಸ್ಸಾಂನ ನೂತನ ಮುಖ್ಯಮಂತ್ರಿಯಾಗಿ ಬಿಜೆಪಿ ಹಿರಿಯ ನಾಯಕ ಮತ್ತು ಮಾಜಿ ಸಿಎಂ ಹಿಮಂತ ಬಿಸ್ವಾ ಶರ್ಮಾ ಅವರು ಆಯ್ಕೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ಗುವಾಹತಿಯಲ್ಲಿ ಇಂದು ನಡೆದ ಬಿಜೆಪಿ ಪಕ್ಷದ ಶಾಸಕಾಂಗ ಪಕ್ಷದ ಸಭೆಯಲ್ಲಿ ಹಿಮಂತ ಬಿಸ್ವಾ ಶರ್ಮಾ ಅವರನ್ನು ಅವಿರೋಧವಾಗಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ ಮಾಡಲಾಗಿದೆ ಎಂದು ಕೇಂದ್ರ ಸಚಿವ ಹಾಗೂ ಬಿಜೆಪಿ ನಾಯಕ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.
ಇಂದು ಬೆಳಗ್ಗಯಷ್ಟೇ ತಮ್ಮ ಸಿಎಂ ಸ್ಥಾನಕ್ಕೆ ಸರ್ಬಾನಂದ ಸೋನೋವಾಲ್ ಅವರು ರಾಜಿನಾಮೆ ನೀಡಿದ್ದರು. ಗವರ್ನರ್ ಜಗದೀಶ್ ಮುಖಿ ಅವರನ್ನು ಭೇಟಿ ಮಾಡಿದ್ದ ಅವರು ರಾಜಿನಾಮೆ ಸಲ್ಲಿಕೆ ಮಾಡಿದ್ದು, ಈ ರಾಜಿನಾಮೆಯನ್ನು ರಾಜ್ಯಪಾಲರು ಆಂಗೀರಿಸಿದ್ದಾರೆ ಎಂದು ತಿಳಿದುಬಂದಿದೆ.
2016ರ ಚುನಾವಣೆಯಲ್ಲಿ ಸೋನೊವಾಲ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದ್ದ ಬಿಜೆಪಿ, ಅಧಿಕಾರಕ್ಕೆ ಬಂದಿತ್ತು. 126 ಸದಸ್ಯಬಲದ ಅಸ್ಸಾಂ ವಿಧಾನಸಭೆಯಲ್ಲಿ ಬಿಜೆಪಿ 60 ಕ್ಷೇತ್ರಗಳಲ್ಲಿ ಹಾಗೂ ಮಿತ್ರಪಕ್ಷಗಳಾದ ಎಜಿಪಿ 9 ಕ್ಷೇತ್ರಗಳಲ್ಲಿ, ಯುಪಿಪಿಎಲ್ 6 ಕ್ಷೇತ್ರಗಳಲ್ಲಿ ಜಯ ಸಾಧಿಸಿವೆ.
ಹಿಮಂತ ಬಿಸ್ವಾ ಶರ್ಮಾ ಅವರು ಅಸ್ಸಾಂನ ಮುಂದಿನ ಮುಖ್ಯಮಂತ್ರಿಯಾಗಿ ನಾಳೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ.