ನವದೆಹಲಿ: ಪ್ರಸಿದ್ಧ ವೈರಾಣು ಶಾಸ್ತ್ರಜ್ಞ ಶಾಹಿದ್ ಜಮೀಲ್ ಅವರು ಕೇಂದ್ರದ ಕೋವಿಡ್ ಪ್ಯಾನೆಲ್ ತೊರೆದು ಹೊರಬಂದಿದ್ದಾರೆ.
ಕೊರೊನಾ ರೂಪಾಂತರಿ ಸೋಂಕು ಪತ್ತೆ ಹಚ್ಚುವ ಹಾಗೂ ಸಂಶೋಧಿಸುವ ಕಾರ್ಯವನ್ನು ಈ ಕೋವಿಡ್ 19 ಜಿನೋಮ್ ಅಧ್ಯಯನ ಕೇಂದ್ರ ನಡೆಸುತ್ತಿತ್ತು.
ವೈರಾಣು ವಂಶವಾಹಿ, ರೂಪಾಂತರಿ ವೈರಸ್ ಕುರಿತು ಅಧ್ಯಯನ ಹಾಗೂ ಸಂಶೋಧನೆ ನಡೆಸಲು ಇಂಡಿಯನ್ ಸಾರ್ಸ್ ಕೋವ್ 2 ಜಿನೋಮಿಕ್ಸ್ ಒಕ್ಕೂಟವನ್ನು ಸರ್ಕಾರ ರಚನೆ ಮಾಡಿತ್ತು. ಈ ತಂಡದಲ್ಲಿ ಶಾಹೀದ್ ಪ್ರಮುಖ ಸದಸ್ಯರಾಗಿದ್ದರು.
ಸರ್ಕಾರವು ಕೊರೊನಾ ಸೋಂಕನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಹೇಳುವ ಮೂಲಕ ರಾಜೀನಾಮೆ ನೀಡಿ ಹೊರಬಂದಿದ್ದಾರೆ. ಅಧ್ಯಯನ ಕೇಂದ್ರದ ಸದಸ್ಯರು ಹಾಗೂ ಸರ್ಕಾರದ ಒತ್ತಡವೇ ರಾಜೀನಾಮೆಗೆ ಕಾರಣ ಎಂದು ಹೇಳಲಾಗುತ್ತಿದೆ. ಅಶೋಕ ವಿಶ್ವವಿದ್ಯಾಲಯದ ತ್ರಿವೇದಿ ಸ್ಕೂಲ್ ಆಫ್ ಬಯೋಸೈನ್ಸ್‌ನ ನಿರ್ದೇಶಕರಾಗಿರುವ ಜಮೀಲ್ ಇತ್ತೀಚೆಗಷ್ಟೇ ಸಾಂಕ್ರಾಮಿಕ ರೋಗ ಹಾಗೂ ಸರ್ಕಾರ ನಿರ್ವಹಿಸುತ್ತಿರುವ ರೀತಿ ಕುರಿತು ಟೀಕೆ ವ್ಯಕ್ತಪಡಿಸಿದ್ದರು.
ಕೋವಿಡ್-19 ಏರಿಕೆಯಾಗುತ್ತಿರುವ ಸಂದರ್ಭದಲ್ಲಿ ವೈರಾಣು ಶಾಸ್ತ್ರಜ್ಞ ಶಾಹಿದ್ ಜಮೀಲ್ ರಾಜೀನಾಮೆ ನೀಡಿರುವುದು ಕೇಂದ್ರಕ್ಕೆ ತೀವ್ರ ಮುಜುಗರ ಉಂಟುಮಾಡಿದೆ.
ಕೋವಿಡ್-19 ವೈರಾಣುಗಳ ವಂಶವಾಹಿ ಹಾಗೂ ರೂಪಾಂತರಗಳನ್ನು ಅಧ್ಯಯನ ಮಾಡುವ ಸಂಬಂಧ ಕಳೆದ ವರ್ಷ ಡಿಸೆಂಬರ್ ನಲ್ಲಿ ಕೇಂದ್ರ ಸರ್ಕಾರ ಇಂಡಿಯನ್ SARS-CoV-2 ಜಿನೋಮಿಕ್ಸ್ ಒಕ್ಕೂಟ (INSACOG)ವನ್ನು ರಚಿಸಿತ್ತು.