ಕಾಸರಗೋಡು: ಆಸ್ಪತ್ರೆಗೆ ಕರೆದೊಯ್ಯಲು ಆಂಬ್ಯುಲೆನ್ಸ್ ಲಭ್ಯವಿಲ್ಲದ ಕಾರಣ ಕೊರೋನಾ ರೋಗಿಯನ್ನು ಪಿಕಪ್ ವ್ಯಾನ್‍ನಲ್ಲಿ ಕರೆದೊಯ್ದ ಘಟನೆಯ ಬಗ್ಗೆ ಗ್ರಾ.ಪಂ.ಅಧ್ಯಕ್ಷ ಟಿ.ಕೆ.ರವಿ ಪ್ರತಿಕ್ರಿಯೆ ನೀಡಿದ್ದಾರೆ. ಜಿಲ್ಲೆಯ ನೀಲೇಶ್ವರದಲ್ಲಿ ಈ ಘಟನೆ ನಡೆದಿದೆ. ಕೂರಂಕುಂಡು ಮೂಲದ ಕ್ಸೇವಿಯರ್ ಸಾಬು ಅವರನ್ನು ಆಸ್ಪತ್ರೆಗೆ ಸಾಗಿಸಲು ಪಿಕಪ್ ವ್ಯಾನ್ ಬಳಸಲಾಗಿತ್ತು. ರೋಗಿ ಮೃತಪಟ್ಟ ನಂತರ ಈ ಘಟನೆ ಬೆಳಕಿಗೆ ಬಂದಿದೆ.
ಆಂಬ್ಯುಲೆನ್ಸ್‍ಗೆ ಕರೆ ಮಾಡದ ಕಾರಣ ರೋಗಿಯನ್ನು ಪಿಕಪ್ ವ್ಯಾನ್‍ನಲ್ಲಿ ಕರೆದೊಯ್ಯಲಾಗಿದೆ ಎಂದು ಪಂಚಾಯತಿ ಅಧಿಕಾರಿಗಳು ವಿವರಿಸಿದರು. ಆಂಬ್ಯುಲೆನ್ಸ್ ಬರಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಮನೆಗೆ ತೆರಳುವ ರಸ್ತೆ ಕಳಪೆಯಾಗಿದ್ದು ಅಟೋರಿಕ್ಷಾ, ಕಾರು ಮತ್ತು ಆಂಬುಲೆನ್ಸ್‍ಗಳು ಇಲ್ಲಿಗೆ ತಲುಪುವುದು ಕಷ್ಟ. ಜೀಪ್ ಮತ್ತು ಪಿಕಪ್ ನಂತಹ ವಾಹನಗಳು ಮಾತ್ರ ತಲುಪಬಹುದು. ಅದಕ್ಕಾಗಿಯೇ ಪಿಕಪ್ ವ್ಯಾನ್ ಬಳಸಲಾಗಿದೆ ಎಂದು ಗ್ರಾಮ ಪಂಚಾಯತಿ ಅಧ್ಯಕ್ಷರು ಫೇಸ್‍ಬುಕ್‍ನಲ್ಲಿ ಬರೆದಿದ್ದಾರೆ.
ಪ್ರಜ್ಞೆ ತಪ್ಪಿದ ಕ್ಸೇವಿಯರ್ ಅವರನ್ನು ಆಸ್ಪತ್ರೆಗೆ ಸಾಗಿಸಲು ಪಿಕ್ ಅಪ್ ವಾಹನ ಬಳಸಲಾಗಿತ್ತು. ಕ್ಸೇವಿಯರ್ ಕೊರೋನಾ ಮುಕ್ತರಾಗಿದ್ದರು. ಅವರು ಇತರ ಕೆಲವು ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆಗೊಳಗಾಗಿದ್ದರು. ಕ್ಸೇವಿಯರ್ ಅವರಿಗೆ ಹೃದಯ ಸಂಬಂಧಿ ಅನಾರೋಗ್ಯವಿತ್ತು. ಅವರ ಆರೋಗ್ಯವು ಗಂಭೀರವಾಗಿದ್ದರಿಂದ ಅವರನ್ನು ಆಸ್ಪತ್ರೆಗೆ ಸಾಗಿಸಲು ಪಿಕಪ್ ವ್ಯಾನ್ ಬಳಸಲಾಗಿದೆ ಎಂದು ಅಧ್ಯಕ್ಷರು ವಿವರಿಸಿರುವರು. ಆದರೆ ಕ್ಸೇವಿಯರ್ ಅವರ ಆರೋಗ್ಯ ಹದಗೆಟ್ಟಿದ್ದರಿಂದ ಆಂಬ್ಯುಲೆನ್ಸ್‍ಗೆ ಕರೆ ಮಾಡಲಾಗಿತ್ತು. ಆದರೆ ತಾಂತ್ರಿಕ ಕಾರಣಗಳಿಂದ ವಾಹನ ಬರಲಾಗುವುದಿಲ್ಲ ಎಂಬ ಉತ್ತರ ಲಭಿಸಿದ್ದರಿಂದ ಪಿಕ್ ಅಪ್ ನಲ್ಲಿ ಕರೆದೊಯ್ಯಲಾಯಿತು ಎಂದು ಕುಟುಂಬ ಆರೋಪಿಸಿದೆ.