ನವದೆಹಲಿ: 'ತಿರುಚಿದ ಮೀಡಿಯಾ' ಟ್ಯಾಗ್ ಗಳ ವಿಚಾರದಲ್ಲಿ ಪೊಲೀಸರಿಂದ ಬೆದರಿಕೆ ಹಾಕಲಾಗಿದೆ ಎಂದು ಟ್ವಿಟರ್ ಹೇಳಿದ ನಂತರ ಮೈಕ್ರೊಬ್ಲಾಗಿಂಗ್ ವೇದಿಕೆ ನೀಡಿರುವ ಹೇಳಿಕೆ ನಿರಾಧಾರ, ತಪ್ಪು ಮತ್ತು ದೇಶಕ್ಕೆ ಅಪಖ್ಯಾತಿ ತರುವ ಪ್ರಯತ್ನವಾಗಿದೆ ಎಂದು ಕೇಂದ್ರ ಸರ್ಕಾರ ಗುರುವಾರ ಖಂಡಿಸಿದೆ.
ಟ್ವಿಟರ್ ಸೇರಿದಂತೆ ಸೋಶಿಯಲ್ ಮೀಡಿಯಾ ಕಂಪನಿಗಳ ಪ್ರತಿನಿಧಿಗಳು, ದೇಶದಲ್ಲಿ ಯಾವುದೇ ಸುರಕ್ಷಿತವಾಗಿ ಇರಲಿದ್ದಾರೆ. ಅವರ ವೈಯಕ್ತಿಕ ಸುರಕ್ಷತೆ ಮತ್ತು ಭದ್ರತೆಗೆ ಯಾವುದೇ ಬೆದರಿಕೆ ಇಲ್ಲ ಎಂದು ಮಾಹಿತಿ ತಂತ್ರಜ್ಞಾನ ಸಚಿವಾಲಯ ಪ್ರತಿಪಾದಿಸಿದೆ.
ಟ್ವಿಟರ್ ಹೇಳಿಕೆ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವಕ್ಕೆ ನಿಯಮಗಳನ್ನು ನಿರ್ದೇಶಿಸುವ ಪ್ರಯತ್ನವಾಗಿದೆ. ಟ್ವಿಟರ್ ತನ್ನ ಕಾರ್ಯಗಳು ಮತ್ತು ಉದ್ದೇಶಪೂರ್ವಕವಾಗಿ ಕೆಣಕುವ ಮೂಲಕ ಭಾರತದ ಕಾನೂನು ವ್ಯವಸ್ಥೆಯನ್ನು ಹಾಳುಮಾಡಲು ಪ್ರಯತ್ನಿಸುತ್ತದೆ ಎಂದು ಸಚಿವಾಲಯ ಹೇಳಿದೆ.
ಟ್ವಿಟರ್ ನೀಡಿರುವ ದುರಾದೃಷ್ಟಕರ ಹೇಳಿಕೆಯನ್ನು ಸರ್ಕಾರ ಖಂಡಿಸಿದು, ಅದು ಸಂಪೂರ್ಣವಾಗಿ ನಿರಾಧಾರ, ಸುಳ್ಳು ಮತ್ತು ತಮ್ಮ ಸ್ವಂತ ದಡ್ಡತನವನ್ನು ಮರೆ ಮಾಚಲು ದೇಶಕ್ಕೆ ಅಪಖ್ಯಾತಿ ತರುವ ಪ್ರಯತ್ನವಾಗಿದೆ ಎಂದು ಮಾಹಿತಿ ಸಚಿವಾಲಯ ತಿಳಿಸಿದೆ.
ಇದಕ್ಕೂ ಮುನ್ನ, ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಇರುವ ಸಂಭಾವ್ಯ ಆಪಾಯ ಮತ್ತು ಪೊಲೀಸರ ಮೂಲಕ ಬೆದರಿಸುವ ತಂತ್ರದ ಬಗ್ಗೆ ಟ್ವಿಟರ್ ಆತಂತ ವ್ಯಕ್ತಪಡಿಸಿತ್ತು. ತನ್ನ ಕಚೇರಿಗೆ ಪೊಲೀಸರ ಭೇಟಿ ಪ್ರಸ್ತಾಪಿಸಿ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ತನ್ನ ಸಂಸ್ಥೆಯ ನೌಕರರ ಭದ್ರತೆ ಬಗ್ಗೆಯೂ ಕಳವಳ ವ್ಯಕ್ತಪಡಿಸಿತ್ತು.