ನವದೆಹಲಿ: ಕೊರೊನಾ ವೈರಸ್‌ನ ಲಸಿಕೆಗಳನ್ನು ಈಗ ಖಾಸಗಿ ಆಸ್ಪತ್ರೆಗಳಲ್ಲಿ ಮಾರಾಟ ಮಾಡಲು ಅವಕಾಶವನ್ನು ನೀಡಲಾಗಿದೆ. ಆದರೆ ಕೆಲ ಖಾಸಗಿ ಆಸ್ಪತ್ರೆಗಳು ಹಾಗೂ ಸಂಸ್ಥೆಗಳು ಹೋಟೆಲ್‌ಗಳ ಜೊತೆಗೆ ಒಪ್ಪಂದವನ್ನು ಮಾಡಿಕೊಂಡು ಪ್ಯಾಕೇಜ್‌ಗಳ ನೀಡುತ್ತಿದೆ. ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ಇಂತಾ ಸಂಸ್ಥೆಗಳನ್ನು ಪತ್ತೆಹಚ್ಚಿ ಕ್ರಮಗಳನ್ನು ಕೈಗೊಳ್ಳಬೇಕೆಂದು ಕೇಂದ್ರ ಸರ್ಕಾರ ಸೂಚನೆಯನ್ನು ನೀಡಿದೆ.
ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಆರೋಗ್ಯ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಮನೋಹರಿ ಅಘ್ನಾನಿ ಪತ್ರವನ್ನು ಬರೆದಿದ್ದು ಈ ಸೂಚನೆಯನ್ನು ನೀಡಿದ್ದಾರೆ. ಈ ಪತ್ರದಲ್ಲಿ ಕೆಲ ಖಾಸಗಿ ಆಸ್ಪತ್ರೆಗಳು ಹೋಟೆಲ್‌ಗಳ ಜೊತೆಗೆ ಒಪ್ಪಂದವನ್ನು ಮಾಡಿಕೊಂಡು ಲಸಿಕೆಯ ಜೊತೆಗೆ ಹೋಟೆಲ್ ರೂಮ್‌ಗಳ ಪ್ಯಾಕೇಜ್ ನೀಡುತ್ತಿದೆ. ಇದು ಈಗಾಗಲೇ ಹೊರಡಿಸಿರುವ ರಾಷ್ಟ್ರೀಯ ಕೋವಿಡ್ ಲಸಿಕೆ ಕಾರ್ಯಕ್ರಮದ ನಿಯಮಗಳಿಗೆ ವಿರುದ್ಧವಾಗಿದೆ ಎಂದು ತಿಳಿಸಿದೆ.
ಸರ್ಕಾರಿ ಕೊರೊನಾ ಲಸಿಕಾ ಕೇಂದ್ರಗಳನ್ನು ಹೊರತುಪಡಿಸಿ ಖಾಸಗಿ ಕೋವಿಡ್ ಲಸಿಕಾ ಕೇಂದ್ರ, ಕೆಲಸದ ಸ್ಥಳ, ವೃದ್ಧರು ಹಾಗೂ ವಿಶೇಷ ಚೇತನರಿಗಾಗಿ ಹೌಸಿಂಗ್ ಸೊಸೈಟಿಗಳಲ್ಲಿ ಲಸಿಕೆ ನೀಡಲಾಗುತ್ತಿದೆ. ಇದನ್ನು ಹೊರತು ಪಡಿಸಿ ರಾಷ್ಟ್ರೀಯ ಕೋವಿಡ್ ಲಸಿಕಾ ಕಾರ್ಯಕ್ರಮದಲ್ಲಿ ಬೇರೆಲ್ಲಿಯೂ ಲಸಿಕೆ ಕಾರ್ಯಕ್ರಮಗಳಿಗೆ ಅವಕಾಶವಿಲ್ಲ. ಈ ನಿಯಮಗಳಿಗೆ ವಿರುದ್ಧವಾಗಿ ಸ್ಟಾರ್ ಹೋಟೆಲ್‌ಗಳಿಗೆ ಲಸಿಕೆಗಳನ್ನು ಕೊಂಡೊಯ್ದು ಲಸಿಕೆ ಹಾಕಿಸುತ್ತಿದ್ದರೆ ಅದನ್ನು ಈ ಕೂಡಲೇ ನಿಲ್ಲಿಸಬೇಕು ಎಂದು ಅಘ್ನಾನಿ ರಾಜ್ಯ ಹಾಕು ಕೇಂದ್ರಾಡಳಿತ ಪ್ರದೇಶಗಳಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
"ಆ ರೀತಿಯ ಸಂಸ್ಥೆಗಳ ವಿರುದ್ಧ ಕಾನೂನು ಹಾಗೂ ಆಡಳಿತಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕು. ಇದರ ಜೊತೆಗೆ ರಾಷ್ಟ್ರೀಯ ಕೋವಿಡ್ ಲಸಿಕಾ ಕಾರ್ಯಕ್ರಮದ ಮಾರ್ಗಸೂಚಿಯಂತೆ ಲಸಿಕೆ ಅಭಿಯಾನ ನಡೆಯುತ್ತಿದೆ ಎಂಬುದನ್ನು ಖಚಿತ ಪಡಿಸಲು ಮೇಲ್ವಿಚಾರಣೆ ನಡೆಸುವಂತೆ ಮನವಿ ಮಾಡುತ್ತೇವೆ" ಎಂದು ಈ ಪತ್ರದಲ್ಲಿ ತಿಳಿಸಲಾಗಿದೆ.
ದೇಶಾದ್ಯಂತ ಸರ್ಕಾರ ಉಚಿತವಾಗಿ ನೀಡುವ ಲಸಿಕಾ ಅಭಿಯಾನಕ್ಕೆ ಲಸಿಕೆಗಳ ಕೊರತೆಗಳು ಹೆಚ್ಚಾಗಿ ಕಾಡುತ್ತಿದೆ. ಹಾಗಿದ್ದರೂ ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ಬೆಲೆಗೆ ಲಸಿಕೆ ನೀಡುವ ಕಾರ್ಯಕ್ರಮಗಳು ನಡೆಯುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇವುಗಳ ಮಧ್ಯೆ ಇನ್ನೂ ಕೆಲ ಖಾಸಗಿ ಆಸ್ಪತ್ರೆಗಳು ಸಾವಿರಾರು ರೂಪಾಯಿಯ ಪ್ಯಾಕೇಜ್‌ಗಳನ್ನು ಘೋಷಣೆ ಮಾಡುತ್ತಿರುವುದು ಹುಬ್ಬೇರುವಂತೆ ಮಾಡಿದೆ.