ಕುಂಬಳೆ: ಅರಣ್ಯಪ್ರದೇಶಗಳಲ್ಲಿ ಮಾತ್ರ ಕಂಡುಬರುವ ಅಪೂರ್ವ ರೀತಿಯ ದುಂಬಿಯನ್ನು ಕುಂಬಳೆ ಕಿದೂರು ಪಕ್ಷಿಗ್ರಾಮದಲ್ಲಿ ಪತ್ತೆಹಚ್ಚಲಾಗಿದೆ. ಪಕ್ಷಿ ಸಂಶೋಧಕ, ಕುಂಬಳೆ ಹೋಲಿ ಫ್ಯಾಮಿಲಿ ಶಾಲಾ ಅಧ್ಯಾಪಕ ಕಿದೂರು ನಿವಾಸಿ ರಾಜು ಮಾಸ್ತರ್ ಮನೆ ಪರಿಸರದ ಬಾವಿಯ ಮೇಲೆ ಹಾರುತ್ತಿದ್ದ ದುಂಬಿಗಳನ್ನು ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ.
ದುಂಬಿ ಸಂಶೋಧಕರಾದ ವಿವೇಕ್‍ಚಂದ್ರನ್ ಇದನ್ನು ಖಚಿತಗೊಳಿಸಿದ್ದಾರೆ. ಪಶ್ಚಿಮಘಟ್ಟ, ಉತ್ತರ, ದಕ್ಷಿಣ ಭಾರತ ರಾಜ್ಯಗಳ ಎತ್ತರವಿರುವ ಪ್ರದೇಶಗಳಲ್ಲಿ Hemicordulia Asiatica ಎಂಬ ಪ್ರಬೇಧದ ಇವು ಸಾಧಾರಣವಾಗಿ ಕಂಡುಬರುತ್ತಿವೆ. ಕಾಸರಗೋಡು ಕಿದೂರಿನಂತಹ ತಗ್ಗು ಪ್ರದೇಶಗಳಲ್ಲಿ ಮೊದಲ ಬಾರಿಗೆ ಇವುಗಳನ್ನು ಪತ್ತೆಹಚ್ಚಲಾಗಿದೆ. ಕೇರಳದಲ್ಲಿ ಒಟ್ಟು ನಾಲ್ಕು ಪ್ರದೇಶಗಳಲ್ಲಿ ಮಾತ್ರವೇ ಈ ದುಂಬಿಯನ್ನು ಈ ಮೊದಲು ಪತ್ತೆಹಚ್ಚಲಾಗಿದೆ ಎಂದು ರಾಜು ಮಾಸ್ತರ್ ಹೇಳಿದ್ದಾರೆ.
2017ರಲ್ಲಿ ಪೆರಿಯಾರಿನಲ್ಲಿ ಇವು ಮೊದಲ ಬಾರಿಗೆ ಕಂಡುಬಂದಿವೆ. ಸುವೋಲಜಿಕಲ್ ಸರ್ವೇ ಆಫ್ ಇಂಡಿಯಾದ ವಿಜ್ಞಾನಿ ಕೆ. ಎ. ಸುಬ್ರಹ್ಮಣ್ಯ ಈ ದುಂಬಿಯನ್ನು ವಸ್ತುನಿಷ್ಠವಾಗಿ ಮನವರಿಕೆ ಮಾಡಿಕೊಂಡಿದ್ದಾರೆ. ಬಳಿಕ ಮೂನ್ನಾರಿನಲ್ಲಿ ಹಾಗೂ ಕೋಝಿಕ್ಕೋಡಿನಲ್ಲಿ ಪತ್ತೆಹಚ್ಚಲಾಗಿದೆ. ಈಗ ಕುಂಬಳೆಯ ಕಿದೂರಿನಲ್ಲಿ ಈ ದುಂಬಿ ಪತ್ತೆಯಾಗಿರುವುದು ಕುತೂಹಲ ಮೂಡಿಸಿದೆ.