ಬದಿಯಡ್ಕ: ಬದಿಯಡ್ಕ-ಏತಡ್ಕ-ಸುಳ್ಯಪದವು ರಸ್ತೆ ನವೀಕರಣ ಕಾಮಗಾರಿ ಕಿಫ್ಬಿ ಅನುದಾನದಲ್ಲಿ ನಡೆಯುತ್ತಿದ್ದು ಏತಡ್ಕದಿಂದ ಕಿನ್ನಿಂಗಾರ್ ವರೆಗೆ ಘನ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.
ಬದಿಯಡ್ಕದಿಂದ ಏತಡ್ಕ ವರೆಗೆ ಎರಡು ಲೇಯರ್ ಮೆಟಲಿಂಗ್ ಹಾಗೂ ಒಂದು ಲೇಯರ್ ಡಾಮರೀಕರಣ ನಡೆದಿದೆ. ಏತಡ್ಕದಿಂದ ಕಿನ್ನಿಂಗಾರು ವರೆಗೆ ರಸ್ತೆ ಅಗಲೀಕರಣ ಪ್ರಕ್ರಿಯೆ ಪೂರ್ತಿಯಾದರೂ ಭಾರಿ ಮಳೆ ಹಾಗೂ ಕೋವಿಡ್ ಹಿನ್ನೆಲೆಯಲ್ಲಿ ಮೆಟಲಿಂಗ್ ಪ್ರಾರಂಭಿಸಲು ಸಾಧ್ಯವಾಗಿರಲಿಲ್ಲ.
ಸತತ ಮಳೆಯಿಂದಾಗಿ ಈ ಪ್ರದೇಶಗಳಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿರುವುದರ ಬೆನ್ನಲ್ಲೇ ಈ ಭಾಗದ ಪಂಚಾಯಿತಿ ಅಧಿಕಾರಿಗಳು, ಸಾರ್ವಜನಿಕರು ಮತ್ತು ಜನರ ಪ್ರತಿನಿಧಿಗಳು ನೀಡಿದ ದೂರಿನಲ್ಲಿ ಕೋವಿಡ್ ಬಾಧಿಸಿತರು, ಇತರ ರೋಗಿಗಳು, ಜನ ಸಾಮಾನ್ಯರಿಗೆ ಎದುರಾಗುತ್ತಿರುವ ತೊಂದರೆಗಳನ್ನು ಪರಿಗಣಿಸಿ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ಪುನಃಸ್ಥಾಪಿಸಲು ಬೇಡಿಕೆ ಮುಂದಿರಿಸಿದ್ದಾರೆ.ಹಾಗೂ ಇದರ ಪ್ರಕಾರ, ಕೋವಿಡ್ ರೋಗಿಗಳು ಸಹಿತ ಜನಸಾಮಾನ್ಯರ ಅಗತ್ಯ ಪರಿಗಣಿಸಿ ಏತಡ್ಕದಿಂದ ಕಿನ್ನಿಂಗಾರುವರೆಗೆ ಒಂದು ಲೇಯರ್ ಮೆಟಲಿಂಗ್ ಪೂರ್ತಿಗೊಳಿಸಿ ವಾಹನ ಸಂಚಾರಕ್ಕೆ ತಾತ್ಕಾಲಿಕ ವ್ಯವಸ್ತೆ ಮಾಡಲಾಗಿದೆ. ಆದರೆ ಪ್ರಸ್ತುತ ಈ ರಸ್ತೆಯಲ್ಲಿ ಕ್ರಷರ್ ಸಾಗಾಟದ ಭಾರಿ ಘನ ವಾಹನಗಳು ಸಂಚರಿಸುತ್ತಿರುವುದು ಗಮನಕ್ಕೆ ಬಂದಿದೆ. ಕ್ರಷರ್ ಸಾಗಾಟದ ಘನ ವಾಹನಗಳು ಸಹಿತ ಭಾರ ಹೇರಿದ ಲಾರಿಗಳು ಸಂಚರಿಸಿದಲ್ಲಿ ರಸ್ತೆ ಹಾನಿಗೊಳಗಾಗುವ ಸಾಧ್ಯತೆ ಇದೆ. ಲಘು ವಾಹನ ಸಂಚಾರಕ್ಕೆ ತಾತ್ಕಾಲಿಕ ಮೆಟಲಿಂಗ್ ಕಾಮಗಾರಿ ನಡೆಸಲಾಗಿದ್ದು ಕಾಮಗಾರಿ ಪೂರ್ತಿಯಾಗುವ ವರೆಗೆ ಈ ರಸ್ತೆಯಲ್ಲಿ ಘನವಾಹನ ಸಂಚಾರವನ್ನು ಸ್ಥಗಿತಗೊಳಿಸುವಂತೆ ಲೋಕೋಪಯೋಗಿ ಇಲಾಖೆ ಬದಿಯಡ್ಕ ರಸ್ತೆ ವಿಭಾಗದ ಸಹಾಯಕ ಎಂಜಿನಿಯರ್ ಕ್ವಾರಿ ಮಾಲಕರಿಗೆ, ಹಾಗೂ ಘನ ವಾಹನ ಸಂಚಾರವನ್ನು ನಿಬರ್ಂಧಿಸುವ ಕ್ರಮ ಕೈಗೊಳ್ಳುವಂತೆ ಬದಿಯಡ್ಕ, ಎಣ್ಮಕಜೆ, ಕುಂಬ್ಡಾಜೆ, ಬೆಳ್ಳೂರು ಗ್ರಾಮ ಪಂಚಾಯಿತಿ ಹಾಗೂ ಬದಿಯಡ್ಕ ಪೆÇಲೀಸ್ ಠಾಣೆಗೆ ತಿಳಿಸಿದ್ದಾರೆ ಹಾಗೂ ದೊಂಪತ್ತಡ್ಕ ಸ್ಟಾರ್ ಮೆಟಲ್ಸ್ ಗೆ ಪ್ರತ್ಯೇಕ ನೋಟೀಸು ನೀಡಿದ್ದಾರೆ.