ತಿರುವನಂತಪುರಂ : ಕೊರೊನಾ ಮೊದಲನೇ ಅಲೆಯಿಂದಲೇ ತಮ್ಮದೇ ವಿಶಿಷ್ಟ ಕಾರ್ಯತಂತ್ರ/ಮಾರ್ಗಸೂಚಿಯಿಂದ ಸುದ್ದಿ ಮಾಡಿದ್ದ ಕೇರಳ, ಈಗ, ಲಸಿಕೆ ಬಳಕೆಯಲ್ಲೂ ದೇಶದ ಇತರ ರಾಜ್ಯಗಳಿಗೆ ಮಾದರಿಯಾಗಿದೆ.
ಕೆಲವು ದಿನಗಳ ಹಿಂದೆ ಲಸಿಕೆ ಸದ್ಬಳಕೆ ವಿಚಾರದಲ್ಲಿ ಪ್ರಧಾನಿ ಮೋದಿಯಿಂದ ಮೆಚ್ಚುಗೆ ಪಡೆದಿದ್ದ ಕೇರಳ ಸರಕಾರ, ಲಸಿಕೆ ಜೀರೋ ವೇಸ್ಟೇಜ್ ಮೂಲಕ ನಾಡಿಗೆ ಮಾದರಿಯಾಗಿದೆ.
ಇಷ್ಟೇ ಅಲ್ಲದೇ, ರಾಜ್ಯಕ್ಕೆ ನಿಗದಿಯಾಗಿದ್ದ ಕೋಟಾದಲ್ಲಿ ಹೆಚ್ಚುವರಿಯಾಗಿ ಉಳಿಕೆಯಾದ ಒಂದು ಲಕ್ಷ ರೆಮ್ಡಿಸಿವಿರ್ ಲಸಿಕೆಯನ್ನು ಕೇಂದ್ರ ಸರಕಾರಕ್ಕೆ ಹಿಂದಿರುಗಿಸಿದೆ. ಆ ಮೂಲಕ, ಲಸಿಕೆ ಅಭಾವವಿರುವ ರಾಜ್ಯಗಳಿಗೆ ಹೆಚ್ಚುವರಿಯಾಗಿ ಕೇರಳದ ಕೋಟಾದಿಂದ ಉಪಯೋಗವಾಗಲಿದೆ.
"ಕೇರಳ ಸರಕಾರ ನಮ್ಮಲ್ಲಿ ಹೆಚ್ಚುವರಿಯಾಗಿ ಉಳಿದಿರುವ ಒಂದು ಲಕ್ಷ ಲಸಿಕೆಯನ್ನು ಕೇಂದ್ರ ಸರಕಾರಕ್ಕೆ ಹಿಂದಿರುಗಿಸಿದ್ದೇವೆ. ಆ ಮೂಲಕ, ಅಭಾವವಿರುವ ರಾಜ್ಯಗಳಿಗೆ ಇದರಿಂದ ಉಪಯೋಗವಾಗಲಿ" ಎಂದು ರಾಜ್ಯದ ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಈ ತಿಂಗಳ ಮೇ ಹದಿನಾರರವರೆಗೆ ಬೇಕಾಗುವಷ್ಟು ರೆಮ್ಡಿಸಿವಿರ್ ಲಸಿಕೆಯನ್ನು ಎಲ್ಲಾ ರಾಜ್ಯಗಳಿಗೆ ಹಂಚಲಾಗಿತ್ತು. ಏಪ್ರಿಲ್ 21-ಮೇ 16ರ ಅವಧಿಗೆ 53ಲಕ್ಷ ಲಸಿಕೆಯನ್ನು ಕೇಂದ್ರ ಸರಕಾರ ರಾಜ್ಯಗಳಿಗೆ ಹಂಚಿತ್ತು.
ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಈ ಲಸಿಕೆಯ ಅಭಾವ ಕಾಡುತ್ತಿತ್ತು. ಜೊತೆಗೆ, ಕಾಳಸಂತೆಯಲ್ಲೂ ಇದು ಮಾರಾಟವಾಗಿತ್ತು. ಬೇರೆ ರಾಜ್ಯಗಳ ಪರಿಸ್ಥಿತಿ ಹೀಗಿರುವಾಗ, ಪಿಣರಾಯಿ ವಿಜಯನ್ ಸರಕಾರದ ಕಾರ್ಯವೈಖರಿ ಇತರರಿಗೂ ಮಾದರಿಯಾಗುವಂತದ್ದು.