ತಿರುವನಂತಪುರಂ: ಸಿಪಿಐ (ಎಂ) ನೇತೃತ್ವದ ಎಲ್‌ಡಿಎಫ್ ಕೇರಳದಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದ್ದು, ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ತಮ್ಮ ವಿಡಿಯೋ ಸಂದೇಶದ ಮೂಲಕ ರಾಜ್ಯದ ಮತದಾರರಿಗೆ ಧನ್ಯವಾದ ಅರ್ಪಿಸಿದ್ದಾರೆ. ಅಲ್ಲದೆ ಜನರು ಎದುರಿಸುತ್ತಿರುವ ಸಮಸ್ಯೆಗಳ ವಿರುದ್ಧ ಎಡಪಕ್ಷಗಳು ಹೋರಾಟವನ್ನು ಮುಂದುವರೆಸಲಿವೆ ಎಂದು ಪ್ರತಿಜ್ಞೆ ಮಾಡಿದ್ದಾರೆ.
ಕೇರಳದ 140 ವಿಧಾನಸಭಾ ಕ್ಷೇತ್ರಗಳಲ್ಲಿ 88 ರಲ್ಲಿ ಆಡಳಿತಾರೂಢ ಎಲ್‌ಡಿಎಫ್ ತನ್ನ ಮುನ್ನಡೆ ಕಾಯ್ದುಕೊಂಡಿದೆ. ಪ್ರತಿಪಕ್ಷದ ಕಾಂಗ್ರೆಸ್ ನೇತೃತ್ವದ ಯುಡಿಎಫ್ 50 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ.
"ಎಲ್‌ಡಿಎಫ್ ಸರ್ಕಾರವು ಜನರು ಎದುರಿಸಿದ ಎಲ್ಲಾ ಸವಾಲುಗಳನ್ನು ಮತ್ತು ಸಾಂಕ್ರಾಮಿಕದ ಸಂಕಟವನ್ನು ನಿಭಾಯಿಸಿದ ರೀತಿ ಅಭೂತಪೂರ್ವವಾಗಿದ್ದು ಜನರು ನಮ್ಮ ಮೇಲೆ ನಂಬಿಕೆ ಇರಿಸಿದ್ದಕ್ಕಾಗಿ ಕೇರಳದ ಜನರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ. ಸರ್ಕಾರ ಕೋವಿಡ್ ಸಮಸ್ಯೆಯನ್ನು ಹೇಗೆ ನಿಭಾಯಿಸಬೇಕು ಎಂದು ಕೇರಳ ಮಾದರಿಯನ್ನು ಜಗತ್ತಿಗೆ ನೀಡಿದೆ." ಅವರು ಹೇಳಿದರು.
"ರಾಷ್ಟ್ರ ಹಾಗೂ ರಾಜ್ಯಗಳೆರಡೂ ಅಪಾಯದಲ್ಲಿದೆ.- ಸಾಂಕ್ರಾಮಿಕ ರೋಗದಿಂದ ಉಂಟಾಗುವ ಜೀವನೋಪಾಯದ ಸಮಸ್ಯೆಗಳು ಮತ್ತು ಸಾಂವಿಧಾನಿಕ, ಜಾತ್ಯತೀತ, ಭಾರತದ ಗಣರಾಜ್ಯದ ರಕ್ಷಣೆ ನಿಟ್ಟಿನಲ್ಲಿ ಎಲ್‌ಡಿಎಫ್ ತನ್ನ ಪಾತ್ರವನ್ನು ವಹಿಸಲಿದೆ ಮತ್ತು ಕೇರಳದ ಜನರು ಯಾವಾಗಲೂ ಒಗ್ಗಟ್ಟಾಗಿ ಇರುತ್ತಾರೆಎಂದು ನಾವು ನಿರೀಕ್ಷಿಸುತ್ತೇವೆ" ಎಂದು ಅವರು ಹೇಳಿದರು.