ಮಂಜೇಶ್ವರ: ಕೇರಳದಾತ್ಯಂತ ಭಾರೀ ಕುತೂಹಲ ಮೂಡಿಸಿದ್ದ ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಮತ್ತೆ ಯು.ಡಿ.ಎಫ್ ನಿಚ್ಚಳ ಬಹುಮತದೊಂದಿಗೆ ಅಚ್ಚರಿ ಮೂಡಿಸಿದೆ.
ಯುಡಿಎಫ್ ಅಭ್ಯರ್ಥಿ, ಯುವ ನೇತಾರ ಎ.ಕೆ.ಎಂ.ಅಶ್ರಫ್ ಎನ್.ಡಿ.ಎ.ಅಭ್ಯರ್ಥಿ, ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಅವರನ್ನು 1243 ಮತಗಳಿಂದ ಪರಾಭವಗೊಳಿಸಿ ಇತಿಹಾಸ ನಿರ್ಮಿಸಿದ್ದಾರೆ.
ಕಳೆದ 2016ರ ವಿಧಾನಸಭಾ ಚುನಾವಣೆಯಲ್ಲಿ ಮಂಜೇಶ್ವರ ಕ್ಷೇತ್ರದಲ್ಲಿ ಅಂದಿನ ಯುಡಿಎಫ್ ಅಭ್ಯರ್ಥಿ ದಿ.ಪಿ.ಬಿ.ಅಬ್ದುಲ್ ರಸಾಕ್ ಬಿಜೆಪಿ ಅ|ಭ್ಯರ್ಥಿ ಕೆ.ಸುರೇಂದ್ರನ್ ವಿರುದ್ದ ಕೇವಲ 89 ಮತಗಳಿಂದ ಜಯಗಳಿಸಿದ್ದರು. ಅಬ್ದುಲ್ ರಸಾಕ್ ಗೆ 56, 870 ಮತಗಳು ಲಭಿಸಿದ್ದರೆ ಕೆ.ಸುರೇಂದ್ರನ್ ರಿಗೆ 56,781 ಮತಗಳು ಲಭಿಸಿ ಪರಾಭವಗೊಂಡಿದ್ದರು.
ಬಳಿಕ ಪಿ.ಬಿ.ಅಬ್ದುಲ್ ರಸಾಕ್ ಅವರ ಅಕಾಲಿಕ ಮರಣದದಿಂದ ತೆರವಾದ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ(2019) 2,14,779 ಮತದಾರರು ಮತದಾನಗೈದು ಯುಡಿಎಫ್ ಅಭ್ಯರ್ಥಿ ಎಂ.ಸಿ.ಕಮರುದ್ದೀನ್ 7923 ಬಹುಮತಗಳಿಂದ ವಿಜಯಶಾಲಿಯಾಗಿದ್ದರು.
ಬಿಜೆಪಿ ಕನಸಿಗೆ ತಣ್ಣೀರು!:
ಬಿಜೆಪಿ ಕೇರಳದಲ್ಲಿ ಖಾತೆ ತೆರೆಯಬೇಕೆಂಬ ಕನಸು ಇಂದು ನಿನ್ನೆಯದಲ್ಲ. ಈ ನಿಟ್ಟಿನಲ್ಲಿ ಬಿಜೆಪಿ ಕಣ್ಣಿಟ್ಟ ಕ್ಷೇತ್ರಗಳಲ್ಲಿ ಮುಖ್ಯವಾದುದು ಮಂಜೇಶ್ವರ. ಕಳೆದ ಒಂದು ದಶಕದಿಂದ ಬಿಜೆಪಿ ಇಲ್ಲಿ ಸುರಿಸುತ್ತಿರುವ ಬೆವರು ಬೆರಗುಗೊಳಿಸಿತ್ತು. ಈ ಬಾರಿಯಂತೂ ಭಾರೀ ಕರ್ನಾಟಕದ ಬಜೆಪಿ ನಾಯಕರ ಮಹಾದಂಡು ಮಂಜೇಶ್ವರದಲ್ಲಿ ಬೀಡುಬಿಟ್ಟಿತ್ತು. ಕೆ.ಸುರೇಂದ್ರನ್ ಎರಡೆರಡು ಕ್ಷೇತ್ರಗಳಿಂದ ಸ್ಪರ್ಧಿಸಿದ್ದರಿಂದ ಪ್ರಚಾರ ಕಾರ್ಯಗಳಿಗೆ ಹೆಲಿಕಾಪ್ಟರ್ ಮೂಲಕ ಓಡಾಟ ನಡೆಸಿದ್ದರು. ಪ್ರಚಾರ ಕಾರ್ಯಗಳಿಗೆ ಭಾರೀ ಮೊತ್ತದ ಹಣವನ್ನೂ ಬಳಸಲಾಗಿತ್ತು. ಆದರೆ ಯಾವುದೂ ಫಲ ನೀಡದಿರುವುದು ಬಿಜೆಪಿ ಕಾರ್ಯಕರ್ತರ ದುಃಖಕ್ಕೆ ಕಾರಣವಾಗಿದೆ.
ಕನ್ನಡಿಗ ಅಭ್ಯರ್ಥಿ:
ಇದೀಗ ಜಯಶಾಲಿಯಾಗಿರುವ ಎಕೆಎಂ ಅಶ್ರಫ್ ಅಪ್ಪಟ ಕನ್ನಡಿಗ. ಮಂಜೇಶ್ವರ ಗೋವಿಂದ ಪೈ ಕಾಲೇಜಿನಲ್ಲಿ ಕನ್ನಡದಲ್ಲಿ ಪದವಿ ಪಡೆದಿರುವ ಎಕೆಎಂ ಅಶ್ರಫ್ ಗಡಿನಾಡಿನ ಇತ್ತೀಚಿನ ಕನ್ನಡ ಹೋರಾಟಗಲಲ್ಲಿ ಮುಂಚೂಣಿಯಲ್ಲಿದ್ದವರು. ಮಂಜೇಶ್ವರ ಬ್ಲಾಕ್ ಪಂಚಾಯತಿ ಅಧ್ಯಕ್ಷರಾಗಿದ್ದ ಎಕೆಎಂ ಸದಾ ನಗುಮೊಗದ ಮೂಲಕ ಜನಪ್ರಿಯರಾಗಿದ್ದಾರೆ.