ತಿರುವನಂತಪುರ: ಕೊರೋನಾ ಪರಿಹಾರ ಕಾರ್ಯಾಚರಣೆಯಲ್ಲಿ ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳು ಅನುಸರಿಸಿರುವ ಮಾದರಿಯನ್ನು ಕೇರಳದಲ್ಲೂ ಜಾರಿಗೊಳಿಸಲು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೈಗೆತ್ತಿಕೊಳ್ಳುವ ಸೂಚನೆ ನೀಡಿದ್ದಾರೆ. ಕೊರೋನಾದಿಂದಾಗಿ ಪೋಷಕರನ್ನು ಕಳೆದುಕೊಂಡಿರುವ ಮಕ್ಕಳನ್ನು ರಾಜ್ಯ ಸರ್ಕಾರ ನೋಡಿಕೊಳ್ಳಲಿದೆ. ಇದಕ್ಕಾಗಿ ವಿಶೇಷ ಪ್ಯಾಕೇಜ್ ಜಾರಿಗೆ ತರಲಾಗುವುದು ಎಂದು ಪಿಣರಾಯಿ ವಿಜಯನ್ ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ಹೇಳಿರುವರು.
ಪೋಷಕರು ಇಲ್ಲದ ಮಕ್ಕಳಿಗೆ ತಲಾ 3 ಲಕ್ಷ ರೂ.ಗಳನ್ನು ಒಂದೇ ಬಾರಿಗೆ ನೀಡಲು ಯೋಜನೆ ಇರಿಸಲಾಗಿದೆ. ಅಥವಾ ಅಂತಹ ಅನಾಥ ಮಕ್ಕಳಿಗೆ ಮಾಸಿಕ 2000 ರೂ.ಗಳಂತೆ 18 ವರ್ಷ ವಯಸ್ಸಿನವರೆಗೆ ಪ್ರತಿತಿಂಗಳೂ ವಿತರಿಸಲಾಗುವುದು. ಜೊತೆಗೆ ಶಿಕ್ಷಣದ ವೆಚ್ಚವನ್ನು ಪದವಿ ಹಂತದವರೆಗೆ ಸರ್ಕಾರ ಭರಿಸಲಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಪೋಷಕರನ್ನು ಕಳೆದುಕೊಂಡ ಮಕ್ಕಳ ಜವಾಬ್ದಾರಿಯನ್ನು ಸರ್ಕಾರ ವಹಿಸಲಿದೆ ಎಂದು ಈಗಾಗಲೇ ಬಿಜೆಪಿ ಆಡಳಿತ ನಡೆಸುವ ಉತ್ತರಪ್ರದೇಶ, ಉತ್ತರಾಖಂಡ್ ಮೊದಲಾದ ರಾಜ್ಯಗಳು ಈಗಾಗಲೇ ಘೋಷಣೆ ಮಾಡಿ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ಇದರ ಬೆನ್ನಿಗೇ ಇತರ ರಾಜ್ಯಗಳೂ ಇದೇ ರೀತಿಯ ನಿರ್ಧಾರಗಳನ್ನು ಘೋಷಿಸಿದ್ದವು. ಇದೀಗ ಕೇರಳ ಕೂಡ ಕ್ರಮ ಕೈಗೊಂಡಿದೆ.