ಬೀಜಿಂಗ್ : ಚೀನಾ ತನ್ನ ರೋವರ್ ಅನ್ನು ಮಂಗಳ ಗ್ರಹದ ಮೇಲೆ ಯಶಸ್ವಿಯಾಗಿ ಇಳಿಸಿದೆ ಎಂದು ಅಲ್ಲಿನ ಸರ್ಕಾರಿ ಸುದ್ದಿ ಮಾಧ್ಯಮಗಳು ತಿಳಿಸಿವೆ. ಇತಿಹಾಸದಲ್ಲಿ ಕೆಂಪು ಗ್ರಹ ಮಂಗಳದಲ್ಲಿ ರೋವರ್ ಇಳಿಸಿದ ಎರಡನೇ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಚೀನೀ ಪುರಾಣಗಳ ಬೆಂಕಿಯ ದೇವರ ಹೆಸರಿನ ಜುರಾಂಗ್ ರೋವರ್ ಅನ್ನು ಶನಿವಾರ ಬೆಳಿಗ್ಗೆ ಮಂಗಳ ಗ್ರಹದ ಮೊದಲೇ ಆಯ್ಕೆ ಮಾಡಿದ ಯುಟೋಪಿಯಾ ಪ್ಲಾನಿಟಿಯಾ ಪ್ರದೇಶದಲ್ಲಿ ಬಂದಿಳಿದಿದೆ ಎಂದು ಸರ್ಕಾರಿ ಸಿನ್ಹುವಾ ಸುದ್ದಿ ಸಂಸ್ಥೆ ತಿಳಿಸಿದೆ.
ಆರು ಚಕ್ರಗಳ ಸೌರಶಕ್ತಿ ಚಾಲಿತ ಜುರಾಂಗ್ ರೋವರ್ ಸುಮಾರು 240 ಕಿಲೋಗ್ರಾಂಗಳಷ್ಟು (529 ಪೌಂಡ್) ತೂಗುತ್ತದೆ ಮತ್ತು ಆರು ವೈಜ್ಞಾನಿಕ ಸಾಧನಗಳನ್ನು ಹೊಂದಿದೆ. ಮಂಗಳನ ಮೇಲ್ಮೈಯಲ್ಲಿ ಜೀವಿಗಳನ್ನು ಹುಡುಕುವ ಸಲುವಾಗಿ ಇದನ್ನು ಮೂರು ತಿಂಗಳ ಕಾರ್ಯಾಚರಣೆಗೆ ಲ್ಯಾಂಡರ್‌ನಿಂದ ನಿಯೋಜಿಸಲಾಗಿದೆ.
ಟಿಯಾನ್ವೆನ್ -1 ಮಾರ್ಸ್ ಆರ್ಬಿಟರ್ ತನ್ನ ಕಾರ್ಯಾಚರಣೆಯ ಸಮಯದಲ್ಲಿ ರೋವರ್‌ಗೆ ತನ್ನ ಸಂಕೇತವನ್ನು ಪ್ರಸಾರ ಮಾಡುತ್ತದೆ ಮತ್ತು ನಂತರ ಒಂದು ಮಂಗಳದ ವರ್ಷಕ್ಕೆ ಗ್ರಹದ ಜಾಗತಿಕ ಸಮೀಕ್ಷೆಯನ್ನು ನಡೆಸುತ್ತದೆ. ರೋವರ್ ಅನ್ನು ಮೇಲ್ಮೈಗೆ ಇಳಿಸುವ ಮೊದಲು ಲ್ಯಾಂಡಿಂಗ್ ಪ್ರದೇಶವನ್ನು ಮರುಪರಿಶೀಲಿಸಲು ಮೂರು ತಿಂಗಳುಗಳ ಕಾಲ ಕಕ್ಷೆಯಲ್ಲಿ ಕಳೆದಿದೆ.
ಕಳೆದ ವರ್ಷ ಜುಲೈ 23 ರಂದು ಹೈನಾನ್‌ನ ವೆನ್‌ಚಾಂಗ್ ಬಾಹ್ಯಾಕಾಶ ಉಡಾವಣಾ ಕೇಂದ್ರದಿಂದ ಲಿಯಾನ್ ಮಾರ್ಚ್ 5ರ ರಾಕೆಟ್ ಮೂಲಕ ಟಿಯಾನ್ವೆನ್ -1 ಅನ್ನು ಉಡಾವಣೆ ಮಾಡಲಾಯಿತು ಮತ್ತು ಕಳೆದ ಫೆಬ್ರವರಿಯಲ್ಲಿ ಮಂಗಳನ ಕಕ್ಷೆಗೆ ಪ್ರವೇಶಿಸುವ ಮೊದಲು ಏಳು ತಿಂಗಳುಗಳ ಪ್ರಯಾಣ ಮಾಡಿದೆ.