ಕೋಲ್ಕತ್ತಾ: ಮುಖ್ಯ ಕಾರ್ಯದರ್ಶಿ ಅಲಪನ್ ಬಂಡೋಪಾಧ್ಯಾಯ ಅವರ ಸೇವೆ ಹಿಂಪಡೆಯುವಂತೆ ಕೇಂದ್ರ ಸರ್ಕಾರ ನೀಡಿರುವ ಆದೇಶವನ್ನು ಹಿಂಪಡೆಯಬೇಕೆಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ. ಈ ಸಮಯದಲ್ಲಿ ಅವರನ್ನು ತಕ್ಷಣಕ್ಕೆ ಮುಖ್ಯ ಕಾರ್ಯದರ್ಶಿ ಹುದ್ದೆಯಿಂದ ಬಿಟ್ಟುಬಿಡುವುದಿಲ್ಲ ಎಂದು ಕೂಡ ಮಮತಾ ಬ್ಯಾನರ್ಜಿ ಪಟ್ಟು ಹಿಡಿದಿದ್ದಾರೆ.
ಈ ಮೂಲಕ ಮೋದಿ ಮತ್ತು ಮಮತಾ ಬ್ಯಾನರ್ಜಿ ನಡುವಿನ ಹಗ್ಗ-ಜಗ್ಗಾಟ ಮತ್ತೊಂದು ವಿಷಯದಲ್ಲಿ ಮುಂದುವರಿದಿದೆ.
ಈ ಕುರಿತು ಇಂದು 5 ಪುಟಗಳ ಪತ್ರವನ್ನು ಪ್ರಧಾನಿಗೆ ಬರೆದಿರುವ ಸಿಎಂ ಮಮತಾ, ಮೂರು ತಿಂಗಳ ವಿಸ್ತರಣೆ ನೀಡಿ ಮುಖ್ಯ ಕಾರ್ಯದರ್ಶಿಗಳ ಸೇವೆಯನ್ನು ವಿಸ್ತರಿಸಿ ಇದೀಗ ಹಿಂತೆಗೆದುಕೊಳ್ಳುವ ನಿರ್ಧಾರ ಮಾಡಿರುವ ಕೇಂದ್ರ ಸರ್ಕಾರ ತನ್ನ ನಿಲುವನ್ನು ಮರುಪರಿಶೀಲಿಸುವಂತೆ ಒತ್ತಾಯಿಸಿದ್ದಾರೆ.
ಕೇಂದ್ರ ಸರ್ಕಾರದ ನಿರ್ಧಾರ ಆಘಾತವನ್ನುಂಟುಮಾಡಿದೆ. ತಮ್ಮ ಜೊತೆ ಸಮಾಲೋಚನೆ ನಡೆಸದೆ ಕೇಂದ್ರ ಏಕಪಕ್ಷೀಯವಾಗಿ ತೀರ್ಮಾನ ತೆಗೆದುಕೊಂಡಿದೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
ಕೇಂದ್ರ ಸರ್ಕಾರದ ಈ ಏಕಪಕ್ಷೀಯ ಆದೇಶ, ಒಂದು ಅವಿವೇಕದ ನಿರ್ಧಾರವಾಗಿದ್ದು, ನಿಮ್ಮ ಅವಿವೇಕತನದ ನಿರ್ಧಾರ ಪಶ್ಚಿಮ ಬಂಗಾಳ ಜನರ ಹಿತಾಸಕ್ತಿಗಳಿಗೆ ವಿರುದ್ಧವಾಗಿದೆ. ನಿಮ್ಮ ಆದೇಶವನ್ನು ಸಾರ್ವಜನಿಕ ಹಿತಾಸಕ್ತಿಯಿಂದ ಹಿಂತೆಗೆದುಕೊಳ್ಳುವಂತೆ ನಾನು ವಿನಮ್ರವಾಗಿ ವಿನಂತಿಸುತ್ತೇನೆ. ಪಶ್ಚಿಮ ಬಂಗಾಳದ ಜನರ ಪರವಾಗಿ ನಿಮ್ಮ ಆತ್ಮಸಾಕ್ಷಿಗೆ ಮತ್ತು ಉತ್ತಮ ಪ್ರಜ್ಞೆಗೆ ನಾನು ಮನವಿ ಮಾಡುತ್ತೇನೆ ಎಂದು ಪ್ರಧಾನಿಗೆ ಬರೆದ ಪತ್ರದಲ್ಲಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಕೊರೋನಾದ ಈ ಕ್ಲಿಷ್ಟ ಪರಿಸ್ಥಿತಿಯಲ್ಲಿ ನಮ್ಮ ಸರ್ಕಾರ ಮುಖ್ಯ ಕಾರ್ಯದರ್ಶಿಗಳನ್ನು ಬಿಟ್ಟುಕೊಡುವುದಿಲ್ಲ, ಮುಖ್ಯ ಕಾರ್ಯದರ್ಶಿಗಳನ್ನು ಇಲ್ಲಿಗೆ ಕಳುಹಿಸುವಾಗ ಹೊರಡಿಸಿದ್ದ ಕಾನೂನಾತ್ಮಕ ಸಮಾಲೋಚನೆ ಮತ್ತು ಸೂಕ್ತ ಕಾನೂನಿಗೆ ಬದ್ಧವಾಗಿ ಸರ್ಕಾರ ಅದನ್ನು ಮೌಲ್ಯಯುತ ಎಂದು ಪರಿಗಣಿಸಿ ಮುಖ್ಯ ಕಾರ್ಯದರ್ಶಿಗಳನ್ನು ಮುಂದುವರಿಸಲಿದೆ ಎಂದು ಮಮತಾ ಪತ್ರದಲ್ಲಿ ವಿವರಿಸಿದ್ದಾರೆ.
ಕೇಂದ್ರ ಸರ್ಕಾರ ಅಚ್ಚರಿಯ ನಡೆಯೊಂದರಲ್ಲಿ ಮೊಮ್ಮೆ ಮೇ 28ರಂದು ರಾತ್ರಿ, ತಮಗೆ ಅಲಪನ್ ಬಂಡೋಪಾಧ್ಯಾಯ ಅವರ ಸೇವೆ ಬೇಕಾಗಿದ್ದು, ತಕ್ಷಣವೇ ಅವರನ್ನು ಬಿಟ್ಟುಕೊಡಿ ಎಂದು ಕೇಳಿತ್ತು.
ಇಂದು ಸೇವೆಯಿಂದ ನಿವೃತ್ತರಾಗಲಿದ್ದ ಬಂಡೋಪಾಧ್ಯಾಯ: 1987ರ ವಿಭಾಗದ ಪಶ್ಚಿಮ ಬಂಗಾಳ ಕ್ಯಾಡರ್ ನ ಐಎಎಸ್ ಅಧಿಕಾರಿಯಾಗಿರುವ ಬಂಡೋಪಾಧ್ಯಾಯ ಅವರಿಗೆ 60 ವರ್ಷವಾಗಿದ್ದು ಇಂದು ಸೇವೆಯಿಂದ ನಿವೃತ್ತರಾಗಬೇಕಾಗಿತ್ತು. ಆದರೆ ಕೋವಿಡ್ ನಿರ್ವಹಣೆಗೆಂದು ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿ ಮೂರು ತಿಂಗಳ ಸೇವಾವಧಿ ವಿಸ್ತರಣೆಗೆ ಕೇಂದ್ರ ಅನುಮತಿ ನೀಡಿತ್ತು.
ಮೇ 28ರಂದು ಸಿಬ್ಬಂದಿ ಸಚಿವಾಲಯವು ಭಾರತೀಯ ಆಡಳಿತ ಸೇವೆ (ಕೇಡರ್) ನಿಯಮಗಳು, 1954 ರ ನಿಬಂಧನೆಗಳ ಪ್ರಕಾರ, ತಕ್ಷಣದ ಜಾರಿಗೆ ಬರುವಂತೆ ಬಂಡೋಪಾಧ್ಯಾಯರ ಸೇವೆಗಳನ್ನು ಭಾರತ ಸರ್ಕಾರದೊಂದಿಗೆ ನಿಯೋಜಿಸಲು ಕ್ಯಾಬಿನೆಟ್ ನೇಮಕಾತಿ ಸಮಿತಿ ಅನುಮೋದನೆ ನೀಡಿದೆ ಎಂದು ಪಶ್ಚಿಮ ಬಂಗಾಳ ಸರ್ಕಾರಕ್ಕೆ ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇಂದು ಸೋಮವಾರ ಬೆಳಗ್ಗೆ 10 ಗಂಟೆಗೆ ಬಂಡೋಪಾಧ್ಯಾಯ ಅವರು ಸಿಬ್ಬಂದಿ ಮತ್ತು ತರಬೇತಿ ಇಲಾಖೆ ದೆಹಲಿಯಲ್ಲಿ ಕರ್ತವ್ಯಕ್ಕೆ ಹಾಜರಾಗುವಂತೆ ಕೂಡ ಕೇಂದ್ರ ಆದೇಶ ನೀಡಿದೆ.
ಇದು ಜಗಳ ಮಾಡುವ ಸಮಯವಲ್ಲ: ಮುಖ್ಯ ಕಾರ್ಯದರ್ಶಿಗಳ ವರ್ಗಾವಣೆ ವಿಚಾರದಲ್ಲಿ ರಾಜಕೀಯ ಮಾಡುವ, ಜಗಳ ಮಾಡುವ ಸಮಯ ಇದಲ್ಲ, ಕೇಂದ್ರ ಸರ್ಕಾರ ಪಶ್ಚಿಮ ಬಂಗಾಳ ಸರ್ಕಾರದೊಂದಿಗೆ ಈ ರೀತಿ ಕೊರೋನಾ ಸಮಯದಲ್ಲಿ ವರ್ತಿಸಬಾರದು, ಬದಲಿಗೆ ಕೊರೋನಾ ವಿರುದ್ಧ ಹೋರಾಟದಲ್ಲಿ ರಾಜ್ಯ ಸರ್ಕಾರಗಳಿಗೆ ಸಹಕಾರ ನೀಡಬೇಕು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪ್ರತಿಕ್ರಿಯಿಸಿದ್ದಾರೆ.
ಇದು ರಾಜ್ಯ ಸರ್ಕಾರಗಳೊಂದಿಗೆ ಹೋರಾಡುವ ಸಮಯವಲ್ಲ, ಎಲ್ಲರೊಂದಿಗೆ ಒಟ್ಟಾಗಿ ಕೊರೋನವೈರಸ್ ವಿರುದ್ಧ ಹೋರಾಡಬೇಕಿದೆ ಎಂದು ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
ये समय राज्य सरकारों से लड़ने का नहीं है, सबके साथ मिलकर करोना से लड़ने का है। ये समय राज्य सरकारों की मदद करने का है, उन्हें वैक्सीन उपलब्ध करवाने का है, सभी राज्य सरकारों को साथ लेकर एक होकर टीम इंडिया बनकर काम करने का है। लड़ाई झगड़े और राजनीति करने को पूरी ज़िंदगी पड़ी है pic.twitter.com/qwUVjcLA3i
— Arvind Kejriwal (@ArvindKejriwal) May 31, 2021