ಕೊಯಮತ್ತೂರ್ : ವಿಶ್ವಾದ್ಯಂತ ಲಕ್ಷಾಂತರ ಸಂಖ್ಯೆಯಲ್ಲಿ ಮನುಷ್ಯರನ್ನು ಬಲಿ ಪಡೆಯುತ್ತಿರುವ ಕೊರೊನಾ ಮಹಾಮಾರಿಯ ಹೊಡೆತದಿಂದ ಪಾರಾಗಲು, ಹಲವು ಧಾರ್ಮಿಕ ಆಚರಣೆಗಳಿಗೆ ಜನರು ಶರಣಾಗುತ್ತಿರುವುದು ಕಂಡುಬಂದಿದೆ. ಇದೀಗ ತಮಿಳುನಾಡಿನ ದೇವಾಲಯವೊಂದು 'ಕೊರೊನಾ ದೇವಿ'ಯ ವಿಗ್ರಹವನ್ನು ಸ್ಥಾಪನೆ ಮಾಡಿ ಪೂಜೆ ಆರಂಭಿಸಿದೆ.
ಕೊಯಮತ್ತೂರ್ನ ಕಾಮಾಚ್ಚಿಪುರಿ ಅಧೀನಂ ದೇವಸ್ಥಾನವು ಒಂದೂವರೆ ಅಡಿ ಎತ್ತರದ ಕಪ್ಪು ಗ್ರಾನೈಟ್ನಲ್ಲಿ ನಿರ್ಮಿಸಿರುವ 'ಕೊರೊನಾ ದೇವಿ' ವಿಗ್ರಹವನ್ನು ಪ್ರತಿಷ್ಠಾಪಿಸಿದೆ. ನಿನ್ನೆಯಿಂದ ಈ ದೇವಿಗೆ ಪೂಜೆ ಸಲ್ಲಿಸಲು ಆರಂಭಿಸಿದೆ. ದೇವಾಲಯದ ಆಡಳಿತ ಮಂಡಳಿ ಈ ದೇವತೆಗೆ ವಿಶೇಷ ಪೂಜೆಗಳೊಂದಿಗೆ 48 ದಿನಗಳ ಮಹಾಯಾಗವನ್ನು ನಡೆಸಲು ಉದ್ದೇಶಿಸಿದ್ದು, ಇದರಿಂದ ಕರೊನಾ ನಿವಾರಣೆಯಾಗವುದೆಂದು ಆಶಿಸಿದ್ದಾರೆ.
ತಮಿಳುನಾಡಿನಲ್ಲಿ ಕಳೆದ 24 ಗಂಟೆಗಳಲ್ಲಿ 34,875 ಹೊಸ ಕರೊನಾ ಪ್ರಕರಣಗಳು ವರದಿಯಾಗಿದ್ದು, ಈವರೆಗೆ 16,99,225 ಜನರು ಕರೊನಾ ಸೋಂಕಿಗೆ ಒಳಗಾಗಿದ್ದಾರೆ. ನಿನ್ನೆ 365 ಕರೊನಾ ಸಂಬಂಧಿತ ಸಾವುಗಳು ಸಂಭವಿಸಿದ್ದು, ರಾಜ್ಯದಲ್ಲಿ ಒಟ್ಟು ಮೃತರ ಸಂಖ್ಯೆಯು 18,734ಕ್ಕೆ ಏರಿದೆ.