ನವದೆಹಲಿ: ಸೆಂಟ್ರಲ್ ವಿಸ್ತಾ ಯೋಜನೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಕೇಂದ್ರ ಲೋಕೋಪಯೋಗಿ ಇಲಾಖೆಯು ಇಂಡಿಯಾ ಗೇಟ್ ಬಳಿಯ ನಿರ್ಮಾಣ ಸ್ಥಳದಲ್ಲಿ ಛಾಯಾಗ್ರಹಣ ಹಾಗೂ ವಿಡಿಯೊ ರೆಕಾರ್ಡಿಂಗ್ ಅನ್ನು ನಿಷೇಧಿಸಿದೆ.
ಸೆಂಟ್ರಲ್ ವಿಸ್ತಾ ಯೋಜನೆಯ ನಿರ್ಮಾಣ ಸ್ಥಳದಲ್ಲಿ ಬುಧವಾರ 'ಛಾಯಾಗ್ರಹಣ ಹಾಗೂ ವಿಡಿಯೊ ರೆಕಾರ್ಡಿಂಗ್ ನಿಷೇಧಿಸಲಾಗಿದೆ' ಎನ್ನುವ ನಾಮಫಲಕಗಳನ್ನು ಹಾಕಲಾಗಿದೆ. ಕೇಂದ್ರ ಲೋಕೋಪಯೋಗಿ ಇಲಾಖೆಯು ಈ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ.
ಸುಮಾರು 23 ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸೆಂಟ್ರಲ್ ವಿಸ್ತಾ ಯೋಜನೆಗೆ ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಈ ಯೋಜನೆಯನ್ನು ನಿಲ್ಲಿಸಿ ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಆರೋಗ್ಯ ಮೂಲಸೌಕರ್ಯಕ್ಕಾಗಿ ಈ ಹಣವನ್ನು ವಿನಿಯೋಗಿಸಬೇಕೆಂದು ವಿರೋಧ ಪಕ್ಷಗಳು ಕೇಂದ್ರ ಸರ್ಕಾರವನ್ನು ಒತ್ತಾಯಿಸಿವೆ.