HEALTH TIPS

'ಅನಕ್ಷರಸ್ಥರು ಕೋವಿನ್ ಆಪ್ ನಲ್ಲಿ ಹೇಗೆ ನೋಂದಣಿ ಮಾಡಿಕೊಳ್ಳುತ್ತಾರೆ': ಸರ್ಕಾರದ ಲಸಿಕೆ ನೀತಿಯನ್ನು ಪ್ರಶ್ನಿಸಿದ ಸುಪ್ರೀಂ ಕೋರ್ಟ್

             ನವದೆಹಲಿಕೋವಿಡ್ -19 ಲಸಿಕೆ ಖರೀದಿ ನೀತಿ ಮತ್ತು ನೈಜ 'ಡಿಜಿಟಲ್ ಇಂಡಿಯಾ' ಪರಿಸ್ಥಿತಿಯನ್ನು ಅರಿತುಕೊಳ್ಳದೆ ಜನರು ಲಸಿಕೆ ಪಡೆಯಲು ಕೋವಿನ್ ಅಪ್ಲಿಕೇಶನ್‌ನಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕೆಂಬ ನಿಯಮದ ಬಗ್ಗೆ ಸುಪ್ರೀಂ ಕೋರ್ಟ್ ಸೋಮವಾರ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

        ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್, ಎಲ್ ಎನ್ ರಾವ್ ಮತ್ತು ಎಸ್ ರವೀಂದ್ರ ಭಟ್ ಅವರನ್ನೊಳಗೊಂಡ ವಿಶೇಷ ಪೀಠ, ಲಸಿಕೆ ಹಾಕಿಸಿಕೊಳ್ಳಲು ಕೋವಿನ್ ಆಪ್ ನಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕೆಂದು ಕೇಂದ್ರ ಸರ್ಕಾರ ಆದೇಶ ಮಾಡಿರುವುದರಿಂದ ಜನರಿಗೆ ಸಮಸ್ಯೆಯಾಗುತ್ತಿದೆ. ಡಿಜಿಟಲ್ ಇಂಡಿಯಾ ದೇಶದಲ್ಲಿ ಯಾವ ರೀತಿ ಇದೆ, ಹಳ್ಳಿಗಳಿಗೆ ತಲುಪಿದೆಯೇ, ಜನರಿಗೆ ಬಳಸಲು ಸುಲಭವಾಗುತ್ತಿದೆಯೇ ಈ ಬಗ್ಗೆ ಸರ್ಕಾರ ಆಲೋಚಿಸಿದೆಯೇ ಎಂದು ಪ್ರಶ್ನೆ ಮಾಡಿದೆ.

          ಕೊರೋನಾ ಸೋಂಕು ಇಳಿಮುಖವಾಗುತ್ತಿದೆ, ಪರಿಸ್ಥಿತಿ ಸುಧಾರಿಸುತ್ತಿದೆ ಎಂದು ನೀವು ಹೇಳುತ್ತೀರಿ, ಆದರೆ ಕಣ್ಣು-ಕಿವಿ ತೆರೆದಿಟ್ಟು ನೋಡಿ, ಡಿಜಿಟಲ್ ಇಂಡಿಯಾ, ಡಿಜಿಟಲ್ ಇಂಡಿಯಾ ಎಂದು ಹೇಳುತ್ತಿರುತ್ತೀರಿ, ಗ್ರಾಮಾಂತರ ಪ್ರದೇಶಗಳ ಸ್ಥಿತಿ ಮಾತ್ರ ಭಿನ್ನವಾಗಿದೆ. ಜಾರ್ಖಂಡ್ ನ ಒಬ್ಬ ಅನಕ್ಷರಸ್ಥ ಕಾರ್ಮಿಕ, ಕೂಲಿ ಕೆಲಸ ಮಾಡುವವನು ರಾಜಸ್ತಾನದಲ್ಲಿ ಕೋವಿನ್ ಆಪ್ ನಲ್ಲಿ ಹೇಗೆ ದಾಖಲಾತಿ ಮಾಡಿಕೊಳ್ಳುತ್ತಾನೆ? ಡಿಜಿಟಲ್ ಇಂಡಿಯಾದ ಸಮಸ್ಯೆಗಳನ್ನು ನೀವು ಹೇಗೆ ಬಗೆಹರಿಸುತ್ತಿದ್ದೀರಿ ಎಂದು ಹೇಳಿ ಎಂದು ಸುಪ್ರೀಂ ಕೋರ್ಟ್ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನು ಪ್ರಶ್ನೆ ಮಾಡಿತು.

       ದೇಶಾದ್ಯಂತ ಏನು ನಡೆಯುತ್ತಿದೆ ಎಂದು ಸ್ವಲ್ಪ ಕಣ್ಣು-ಕಿವಿ ತೆರೆದು ನೋಡಿ, ವಾಸ್ತವ ಪರಿಸ್ಥಿತಿಯನ್ನು ತಿಳಿದುಕೊಂಡು ಅದಕ್ಕೆ ತಕ್ಕಂತೆ ನೀತಿ-ನಿರೂಪಣೆಗಳನ್ನು ಬದಲಾಯಿಸುತ್ತಿರಿ. ಇದನ್ನು 15-20 ದಿನಗಳ ಹಿಂದೆಯೇ ಮಾಡಬೇಕಾಗಿತ್ತು ಎಂದರು.

       ಇದಕ್ಕೆ ಪ್ರತಿಕ್ರಿಯಿಸಿದ ಸಾಲಿಸಿಟರ್ ಜನರಲ್, ಲಸಿಕೆಗೆ ದಾಖಲಾತಿ ಮಾಡಿಕೊಳ್ಳುವುದು ಕಡ್ಡಾಯ, ಏಕೆಂದರೆ 2ನೇ ಡೋಸ್ ಯಾರ್ಯಾರು ಪಡೆದಿದ್ದಾರೆ, ಯಾರು ಪಡೆಯಲು ಬಾಕಿ ಇದ್ದಾರೆ ಎಂದು ಪತ್ತೆಹಚ್ಚಲು. ಗ್ರಾಮಾಂತರ ಪ್ರದೇಶಗಳಲ್ಲಿ ಲಸಿಕೆಗೆ ದಾಖಲಾತಿ ಮಾಡಿಕೊಳ್ಳಲು ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ ಎಂದರು. ಅದಕ್ಕೆ ಸುಪ್ರೀಂ ಕೋರ್ಟ್, ಈ ಪ್ರಕ್ರಿಯೆಯು ಕಾರ್ಯಸಾಧ್ಯವೆಂದು ಸರ್ಕಾರ ಭಾವಿಸುತ್ತದೆಯೇ ಎಂದು ಕೇಳಿ ನೀತಿ ದಾಖಲೆಯನ್ನು ಇರಿಸುವಂತೆ ಹೇಳಿತು.

ದೇಶದಲ್ಲಿ ಕೋವಿಡ್ ಪರಿಸ್ಥಿತಿ ನಿರ್ವಹಣೆ ಕುರಿತು ಸ್ವಯಂ ಪ್ರೇರಿತ ಅರ್ಜಿ ದಾಖಲಿಸಿಕೊಂಡು ಸುಪ್ರೀಂ ಕೋರ್ಟ್ ಇಂದು ವಿಚಾರಣೆ ಕೈಗೆತ್ತಿಕೊಂಡಿತು. ರಾಜ್ಯ ಸರ್ಕಾರಗಳು ಅಥವಾ ನಗರ ಪಾಲಿಕೆಗಳು ಲಸಿಕೆಗಳನ್ನು ಖರೀದಿಸಬಹುದೇ ಅಥವಾ ನೋಡಲ್ ಏಜೆನ್ಸಿ ಮೂಲಕ ಕೇಂದ್ರ ಸರ್ಕಾರ ಲಸಿಕೆ ಸಂಗ್ರಹಿಸುತ್ತದೆಯೇ, ಈ ಬಗ್ಗೆ ನ್ಯಾಯಾಲಯಕ್ಕೆ ಸರ್ಕಾರದಿಂದ ಸ್ಪಷ್ಟತೆ ಸಿಗಬೇಕಿದೆ ಎಂದು ವಿಶೇಷ ಪೀಠ ಹೇಳಿದೆ.

        ಇದೇ ಸಂದರ್ಭದಲ್ಲಿ, ದೇಶದ ಎಲ್ಲಾ ಅರ್ಹ ಜನರಿಗೆ 2021ನೇ ವರ್ಷದ ಕೊನೆಯ ಹೊತ್ತಿಗೆ ಲಸಿಕೆ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಅಲ್ಲದೆ ಫೈಜರ್ ನಂತಹ ಕಂಪೆನಿಗಳ ಜೊತೆ ಸರ್ಕಾರ ಮಾತುಕತೆ ನಡೆಸುತ್ತಿದ್ದು ಎಲ್ಲಾ ಯಶಸ್ವಿಯಾದರೆ ಅದಕ್ಕೆ ಮೊದಲೇ ಎಲ್ಲರಿಗೂ ಲಸಿಕೆ ದೊರಕಲಿದೆ ಎಂದು ಅಟೊರ್ನಿ ಜನರಲ್ ತುಷಾರ್ ಮೆಹ್ತಾ ಹೇಳಿದರು.

       ಕೋವಿಡ್ ರೋಗಿಗಳ ಜೀವ ಉಳಿಸಲು ಮತ್ತು ಸಾಂಕ್ರಾಮಿಕ ರೋಗಗಳಿಗೆ ಸಾರ್ವಜನಿಕ ಆರೋಗ್ಯ ಪ್ರತಿಕ್ರಿಯೆಯನ್ನು ಸುಲಭಗೊಳಿಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಆಕ್ಸಿಜನ್ ಅನ್ನು ವೈಜ್ಞಾನಿಕವಾಗಿ ಹಂಚುವ ವಿಧಾನವನ್ನು ರೂಪಿಸಲು ಈ ಹಿಂದೆ ಸುಪ್ರೀಂ ಕೋರ್ಟ್, 12 ಸದಸ್ಯರ ರಾಷ್ಟ್ರೀಯ ಕಾರ್ಯಪಡೆ ರಚಿಸಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries