ತಿರುವನಂತಪುರ: ವಿಧಾನಸಭಾ ಚುನಾವಣೆಯಲ್ಲಿನ ಸೋಲಿನ ಜವಾಬ್ದಾರಿಯನ್ನು ವಹಿಸಿಕೊಂಡು ಕೆ.ಸುರೇಂದ್ರನ್ ಬಿಜೆಪಿ ರಾಜ್ಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧತೆ ಪ್ರಕಟಿಸಿದ್ದಾರೆ. ತನ್ನ ರಾಜೀನಾಮೆ ನಿರ್ಧಾರವನ್ನು ಕೇಂದ್ರ ನಾಯಕರಿಗೆ ಸುರೇಂದ್ರನ್ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.
ಸೋಲಿನ ಬಗ್ಗೆ ಸಮಗ್ರ ಪರಿಶೀಲನೆ ನಡೆಸಲಾಗುವುದು ಎಂದು ಬಿಜೆಪಿ ಕೇಂದ್ರ ನಾಯಕತ್ವ ಪ್ರತಿಕ್ರಿಯಿಸಿದೆ ಎಂದು ಮಾಹಿತಿ ಲಭ್ಯವಾಗಿದೆ. ಚುನಾವಣೆಯಲ್ಲಿ ಪಕ್ಷಕ್ಕಾಗಿರುವ ಪೂರ್ಣ ಪ್ರಮಾಣದ ಸೋಲಿನ ಪ್ರಾಥಮಿಕ ಜವಾಬ್ದಾರಿ ತನ್ನದೆಂದು ಸುರೇಂದ್ರನ್ ಅವರು ಮಂಗಳವಾರ ತಿಳಿಸಿದ್ದರು.
ಏತನ್ಮಧ್ಯೆ, ಪಕ್ಷದ ಕೇಂದ್ರ ನಾಯಕತ್ವವು ಬಿಜೆಪಿಯ ಚುನಾವಣಾ ಪ್ರಣಾಳಿಕೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ ಎಂದು ಹೇಳಲಾಗಿದೆ. ವೈಫಲ್ಯದ ಕಾರಣಗಳನ್ನು ಕಾರ್ಯಕರ್ತರಿಗೆ ಮನವರಿಕೆ ಮಾಡಬೇಕು. ಇಲ್ಲದಿದ್ದರೆ ಅವರ ಸ್ಥೈರ್ಯ ಕುಸಿಯುತ್ತದೆ ಎಂದು ರಾಷ್ಟ್ರೀಯ ನಾಯಕತ್ವ ಕೋರ್ ಸಮಿತಿ ಸಭೆಯಲ್ಲಿ ಸೂಚಿಸಿದೆ.
ಈ ಮಧ್ಯೆ, ರಾಜ್ಯದ ಅನೇಕ ಹಿರಿಯ ನಾಯಕರು ರಾಜ್ಯ ನಾಯಕತ್ವವನ್ನು ಟೀಕಿಸಿದ್ದಾರೆ. ಕೆ ಸುರೇಂದ್ರನ್ ಅªರು ಎರಡೆರಡು ಕ್ಷೇತ್ರಗಳಿಂದ ಸ್ಪರ್ಧಿಸಿರುವುದು, ಹೆಲಿಕಾಪ್ಟರ್ ಸವಾರಿ ಮತ್ತು ಎರಡು ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳ ನಾಮಪತ್ರಗಳನ್ನು ತಿರಸ್ಕರಿಸಿದ ಘಟನೆಗಳು ಮತದಾರರನ್ನು ತಪ್ಪುದಾರಿಗೆಳೆಯಿತು ಎಂದು ಟೀಕಿಸಲಾಗಿದೆ. ಅಲ್ಲದೆ ಬಿಜೆಪಿಯ ಅಧಿಕಾರಶಾಹಿ ಧೋರಣೆಯ ಬಗೆಗೂ ಟೀಕೆಗಳು ಕೇಳಿಬಂದಿದೆ.
ಚುನಾವಣಾ ಸೋಲನ್ನು ನಿರ್ಣಯಿಸಲು ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆ ಈ ವಾರ ಸೇರಲಿದೆ. ಸಭೆಯಲ್ಲಿ ಚುನಾವಣಾ ಸೋಲಿನ ಬಗ್ಗೆ ಅಮೂಲಾಗ್ರ ಚರ್ಚಿಸಲಾಗುವುದು. ಎನ್‍ಡಿಎ ನಾಯಕತ್ವ ಸಭೆ ಕೂಡ ಈ ವಾರ ಸೇರುವ ಸಾಧ್ಯತೆ ಇದೆ.