ನವದೆಹಲಿ: ಕಪ್ಪು ಶಿಲೀಂಧ್ರ (ಬ್ಲ್ಯಾಕ್ ಫಂಗಸ್) ಸೋಂಕು ಕಾಣಿಸಿಕೊಂಡ ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡಲು ಬಜಾಜ್ ಹೆಲ್ತ್‌ಕೇರ್ ಶುಕ್ರವಾರ 'ಪೊಸಾಕೊನಾಝೋಲ್ ಎಪಿಐ' ಎನ್ನುವ ಔಷಧವನ್ನು ಬಿಡುಗಡೆ ಮಾಡಿದೆ.
ಈ ಔಷಧವನ್ನು ತಯಾರಿಸಲು ಮತ್ತು ಮಾರುಕಟ್ಟೆಗೆ ಬಿಡುಗಡೆ ಮಾಡಲು ಗುಜರಾತ್‌ನ ಗಾಂಧಿನಗರದ ಆಹಾರ ಮತ್ತು ಔಷಧ ಆಡಳಿತ ಇಲಾಖೆಯಿಂದ (ಎಫ್‌ಡಿಎ) ಕಂಪನಿಗೆ ಅನುಮೋದನೆ ದೊರೆತಿದೆ.
ಮುಂದಿನ ತಿಂಗಳ ಮೊದಲ ವಾರದಲ್ಲಿ ವಾಣಿಜ್ಯ ಉತ್ಪಾದನೆಯನ್ನು ಆರಂಭಿಸಲಾಗುವುದು ಎಂದು ಕಂಪನಿ ತಿಳಿಸಿದೆ.
'ಈ ಔಷಧದಿಂದ ರೋಗಿಗಳಿಗೆ ಸಕಾಲಕ್ಕೆ ಪರಿಣಾಮಕಾರಿ ಚಿಕಿತ್ಸೆ ದೊರೆಯುತ್ತದೆ ಎನ್ನುವುದು ನಮ್ಮ ಆಶಾಭಾವವಾಗಿದೆ' ಎಂದು ಬಜಾಜ್ ಹೆಲ್ತ್‌ಕೇರ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ಅನಿಲ್ ಜೈನ್ ತಿಳಿಸಿದ್ದಾರೆ.
ದೇಶದ ವಿವಿಧ ಭಾಗಗಳಲ್ಲಿ 11 ಸಾವಿರಕ್ಕೂ ಹೆಚ್ಚು ಕಪ್ಪು ಶಿಲಿಂಧ್ರ ಪ್ರಕರಣಗಳು ಪತ್ತೆಯಾಗಿವೆ.